RR vs LSG: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಕುಲ್ದೀಪ್ ಸೇನ್

Kuldeep Sen, IPL 2022: ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 3 ರನ್​ಗಳ ರೋಚಕ ಜಯ ಸಾಧಿಸಿತು. ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಸ್ಯಾಮ್ಸನ್ ಪಡೆ ನಂಬಿದ್ದು ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಕುಲ್ದೀಪ್ ಸೇನ್ ಅವರನ್ನ.

RR vs LSG: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಕುಲ್ದೀಪ್ ಸೇನ್
Kuldeep Sen RR vs LSG
Follow us
TV9 Web
| Updated By: Vinay Bhat

Updated on: Apr 11, 2022 | 7:35 AM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾನುವಾರ ನಡೆದ ಎರಡೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC vs KKR) 44 ರನ್​​ಗಳ ಅಮೋಘ ಗೆಲುವು  ಕಂಡರೆ, ವಾಂಖಡೆಯಲ್ಲಿ ಜರುಗಿದ ದ್ವಿತೀಯ ಕದನದಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ (LSG vs RR) ತಂಡ 3 ರನ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳೂ 20 ಓವರ್​ಗಳನ್ನು ಆಡಿದರು. ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಸ್ಯಾಮ್ಸನ್ ಪಡೆ ನಂಬಿದ್ದು ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಕುಲ್ದೀಪ್ ಸೇನ್ (Kuldeep Sen) ಅವರನ್ನ. ಅಂತಿಮ 6 ಎಸೆತಗಳಲ್ಲಿ 15 ರನ್​ಗಳನ್ನು ಕಟ್ಟಿ ಹಾಕಲು ಸ್ಯಾಮ್ಸನ್ ಬೌಲಿಂಗ್ ನೀಡಿದ್ದು ಈ ಯುವ ಆಟಗಾರನಿಗೆ. ಈ ಅಗ್ನಿ ಪರೀಕ್ಷೆಯಲ್ಲಿ ಕುಲ್ದೀಪ್ ಸಂಪೂರ್ಣ ಯಶಸ್ಸು ಸಾಧಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಮೊದಲ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡದ ಪರ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಜೋಸ್ ಬಟ್ಲರ್ 11 ಎಸೆತಗಳಲ್ಲಿ 13 ರನ್ ಗಳಿಸಿ ಔಟ್ ಆದರೆ, ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ನಾಯಕ ಸಂಜು ಸ್ಯಾಮ್ಸನ್ 12 ಎಸೆತಗಳಲ್ಲಿ 13 ರನ್ ಬಾರಿಸಿದರೆ, ವಾನ್ ಡರ್ ಡುಸೆನ್ 4 ರನ್ ಬಾರಿಸಿ ಬೇಗನೆ ನಿರ್ಗಮಿಸಿದರು. ಇದರ ನಡುವೆ ತಂಡಕ್ಕೆ ಆಸರೆಯಾಗಿದ್ದು ಶಿಮ್ರೋನ್ ಹೆಟ್ಮೇರ್.

ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರರು ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ದೊಡ್ಡ ಮೊತ್ತ ಗಳಿಸಲಾಗದೆ ಔಟ್ ಆದಾಗ ಹೆಟ್ಮೇರ್ ತಂಡಕ್ಕೆ ಆಸರೆಯಾದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೇರ್ ಆರ್. ಅಶ್ವಿನ್ ಜೊತೆಗೂಡಿ ನೆಲಕಚ್ಚಿ ನಿಂತು ಪಂದ್ಯದ ಅಂತಿಮ ಹಂತದವರೆಗೂ ಹೋರಾಟ ನಡೆಸಿದರು. 36 ಎಸೆತಗಳಲ್ಲಿ ಒಂದು ಫೋರ್, ಆರು ಸಿಕ್ಸರ್ ಸಿಡಿಸಿ 59 ರನ್ ಚಚ್ಚಿ ಅಜೇಯರಾಗಿ ಉಳಿದರು. ರವಿಚಂದ್ರನ್ ಅಶ್ವಿನ್ 28 ರನ್ ಬಾರಿಸಿದರು. ಈ ಮೂಲಕ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಆರ್​​ಆರ್​​ 165 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಲಖನೌ ತಂಡಕ್ಕೆ ಆರಂಭದಲ್ಲೇ ಮರ್ಮಾಘಾತ ಎದುರಾಯಿತು. ರಾಯಲ್ಸ್‌ನ ಎಡಗೈ ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌ ಅದ್ಭುತ ಇನ್‌ಸ್ವಿಂಗ್‌ ಎಸೆತಗಳೊಂದಿಗೆ ಓಪನರ್‌ ಕೆಎಲ್‌ ರಾಹುಲ್ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಕೆ ಗೌತಮ್ ಅವರನ್ನು ಬ್ಯಾಕ್‌ ಟು ಬ್ಯಾಕ್‌ ಎಸೆತಗಲ್ಲಿ ಔಟ್‌ ಮಾಡಿದರು. ಇಬ್ಬರೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಜೇಸನ್ ಹೋಲ್ಡರ್ (8) ಹಾಗೂ ಆಯುಷ್ ಬಡೋನಿ (5) ವೈಫಲ್ಯ ಅನುಭವಿಸಿದರು. ಆರಂಭಿಕ ಆಘಾತ ಕಂಡಿದ್ದ ಲಖನೌ ತಂಡಕ್ಕೆ ಆಸರೆಯಾಗಿ ನಿಂತ ಇನ್‌ಫಾರ್ಮ್ ಬ್ಯಾಟರ್ ಕ್ವಿಂಟನ್‌ ಡಿಕಾಕ್ ಒಟ್ಟಾರೆ 32 ಎಸೆತಗಳಲ್ಲಿ 29 ರನ್‌ಗಳಿಸಿ ಔಟ್‌ ಆದರು. ಚಹಲ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಬಾರಿಸುವ ಪ್ರಯತ್ನ ಮಾಡಿ ವಿಕೆಟ್‌ ಕೈಚೆಲ್ಲಿದರು.

ಇನಿಂಗ್ಸ್‌ ಮಧ್ಯದಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡಿದ ಕೃಣಾಲ್‌ ಪಾಂಡ್ಯ 15 ಎಸೆತಗಳಲ್ಲಿ 22 ರನ್‌ಗಳನ್ನು ಗಳಿಸಿದರು. ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ (38*) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಕೊನೆಯ ಓವರ್​​ನಲ್ಲಿ ಲಖನೌಗೆ ಗೆಲ್ಲಲು 15 ರನ್​ಗಳು ಬೇಕಾಗಿತ್ತು. ಆದರೆ, ಚೊಚ್ಚಲ ಪಂದ್ಯದಲ್ಲೇ ಕುಲ್ದೀಪ್ ಸೇನ್ 20ನೇ ಓವರ್​ನಲ್ಲಿ 11 ರನ್​ಗಳನ್ನಷ್ಟೆ ಬಿಟ್ಟುಕೊಟ್ಟು ಆರ್​ಆರ್​ ಗೆಲುವಿಗೆ ಕಾರಣರಾದರು. ರಾಜಸ್ಥಾನ್ ಪರ ಚಹಲ್ ನಾಲ್ಕು, ಟ್ರೆಂಟ್ ಬೌಲ್ಟ್ ಎರಡು ಮತ್ತು ಪ್ರಸಿದ್ಧ ಕೃಷ್ಣ ಹಾಗೂ ಸೆನ್ ತಲಾ ಒಂದು ವಿಕೆಟ್ ಪಡೆದರು.

SRH vs GT Playing XI IPL 2022: ಟೈಟನ್ಸ್​ಗೆ ಸನ್​ರೈಸರ್ಸ್​ ಸವಾಲು: ಗುಜರಾತ್ ತಂಡದಲ್ಲಿ 1 ಬದಲಾವಣೆ ಸಾಧ್ಯತೆ