Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್
RR vs LSG, IPL 2022: ಲಖನೌ ಸೂಪರ್ ಜೇಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಮುಗಿದ ಬಳಿಕ ಆರ್ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಮಾತನಾಡಿದ್ದು ತಾವು ರೂಪಿಸಿದ ರಣ ರೋಚಕ ಯೋಜನೆಯನ್ನು ರಿವೀಲ್ ಮಾಡಿದ್ದಾರೆ.
ಭಾನುವಾರ ಐಪಿಎಲ್ 2022 ರಲ್ಲಿ (IPL 2022) ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ (RR vs LSG) ನಡುವಣ 20ನೇ ಪಂದ್ಯ ರಣ ರೋಚಕವಾಗಿತ್ತು. ಕೊನೆಯ ಓವರ್ ವರೆಗೂ ಕುದಿಗಾಲಿನಲ್ಲಿ ನಿಲ್ಲಿಸಿದ್ದ ಕದನದಲ್ಲಿ ಸಂಜು ಸ್ಯಾಮ್ಸನ್ ಪಡೆ 3 ರನ್ಗಳ ಜಯ ಸಾಧಿಸಿತು. ಇದುವರೆಗೂ ಬ್ಯಾಟರ್‌ಗಳೇ ಮೇಲುಗೈ ಸಾಧಿಸಿದ್ದ ಐಪಿಎಲ್ 2022 ರಲ್ಲಿ ಮೊದಲ ಬಾರಿ ಬೌಲರ್ನಿಂದ ಕೊನೆಯ ಓವರ್ನಲ್ಲಿ ಆರ್ಆರ್ ಗೆಲುವು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಶಿಮ್ರೋನ್ ಹೆಟ್ಮೆಯರ್ (59*ರನ್, 36 ಎಸೆತ, 1 ಬೌಂಡರಿ, 6 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ 6 ವಿಕೆಟ್‌ಗೆ 165 ರನ್ ಪೇರಿಸಿತು ಪ್ರತಿಯಾಗಿ ಎಲ್‌ಎಸ್‌ಜಿ ತಂಡ 8 ವಿಕೆಟ್‌ಗೆ 162 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯ ಮುಗಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.
“ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಖುಷಿ ತಂದಿದೆ. ಈರೀತಿಯ ಪಂದ್ಯಲ್ಲಿ ಕೊನೆಯ ಓವರ್ ಯಾರಿಗೆ ನೀಡಬೇಕು ಎಂಬುದು ಕಷ್ಟದ ಸಂಗತಿ. ನಾನು ಯಾವ ಬೌಲರ್ ಮೊದಲ ಮೂರು ಓವರ್ ಅನ್ನು ಚೆನ್ನಾಗಿ ಮಾಡಿರುತ್ತಾನೊ ಆತನಿಗೆ ನೀಡುತ್ತೇನೆ. ನನಗೆ ಕುಲ್ದೀಪ್ ಸೇನ್ ಮೇಲೆ ನಂಬಿಕೆಯಿತ್ತು. ಅವರು ಪಂದ್ಯವನ್ನು ಕೈ ಜಾರದಂತೆ ನೋಡಿಕೊಳ್ಳುತ್ತಾರೆ ಎಂಬುದು ತಿಳಿದಿತ್ತು. ಅವರ ವೈಡ್ ಯಾರ್ಕರ್ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕುಲ್ದೀಪ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇವರ ವೈಡ್ ಯಾರ್ಕರ್ ನನ್ನ ಗಮನ ಸೆಳೆದಿತ್ತು,” ಎಂದು ಹೇಳಿದ್ದಾರೆ.
“ಇನ್ನಿಂಗ್ಸ್ನ ಮೊದಲ ಬಾಲ್ ಮಾಡುವುದಕ್ಕೂ ಮುನ್ನ ಟ್ರೆಂಟ್ ಬೌಲ್ಟ್ ನನ್ನ ಬಳಿ ಬಂದು ನಾವು ನಮ್ಮ ಯೋಜನೆಯನ್ನು ಬದಲಾವನೆ ಮಾಡೋಣ ಎಂದರು. ನಾನು ಅರೌಂಡ್ ವಿಕೆಟ್ ಹೋಗುತ್ತಿದ್ದೇನೆ, ಬಳಿಕ ನೇರವಾಗಿ ಕಾಲಿಗೆ ಹಾಕುತ್ತೇನೆ ಆಗ ಬೌಲ್ಡ್ ಆಗಬಹುದು ಎಂದು ಮಾತುಕತೆ ನಡೆಸಿದೆವು. ಅದೇರೀತಿ ನಡೆಯಿತು. ಶಿಮ್ರೊನ್ ಹೆಟ್ಮೇರ್ ವಿಶೇಷ ಪ್ಲೇಯರ್. ನೀವು ಊಟ ಮಾಡಿದ್ದೀರಾ?, ನಿದ್ದೆ ಮಾಡಿದ್ದೀರಾ ಮತ್ತು ಸಂತೋಷವಾಗಿದ್ದೀರಾ? ಇಷ್ಟೆ. ಇವರಿಗೆ ಸಾಕಷ್ಟು ಅನುಭವವಿದೆ. ಆರ್ಆರ್ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಹಲ್ ನಮ್ಮ ತಂಡಕ್ಕೆ ಲಭಿಸಿರುವುದು ಅದೃಷ್ಟ. ಅವರಿಗೆ 1-20 ಓವರ್ಗಳ ಮಧ್ಯೆ ಎಲ್ಲಿ ಬೌಲಿಂಗ್ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಅವರೊಬ್ಬ ಗ್ರೇಟ್ ಲೆಗ್ಸ್ಪಿನ್ನರ್. ಮುಂದಿನ ದಿನಗಳಲ್ಲಿ ಚಹಲ್ ದೊಡ್ಡ ಆಟಗಾರನಾಗುತ್ತಾನೆ,” ಎಂದು ಸ್ಯಾಮ್ಸನ್ ಹೇಳಿದ್ದಾರೆ.
ಸೋತ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, “ನಾನು ಔಟಾದ ಬಗ್ಗೆ ಹೇಳುವುದಾದರೆ ಆ ಬಾಲ್ ಅನ್ನು ಗಮನಿಸಲೇ ಇಲ್ಲ. ನೋಡಿದ್ದರೆ ಏನಾದರು ಮಾಡಬಹುದಿತ್ತು. ಅದು ಅತ್ಯುತ್ತಮ ಬಾಲ್ ಆಗಿತ್ತು. ನಮ್ಮದು ಬಲಿಷ್ಠ ತಂಡ. ಬ್ಯಾಟಿಂಗ್ – ಬೌಲಿಂಗ್ಗೆ ಸಾಕಷ್ಟು ಆಯ್ಕೆಗಳಿವೆ. 20 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದರೂ ಟಾರ್ಗೆಟ್ ಬೆನ್ನಟ್ಟುವ ಬ್ಯಾಟರ್ಗಳು ನಮ್ಮಲ್ಲಿದ್ದಾರೆ ಎಂಬ ನಂಬಿಕೆಯಿತ್ತು. ಒಂದು ಉತ್ತಮ ಜೊತೆಯಾಟದ ಅವಶ್ಯಕತೆಯಿತ್ತು. ತನ್ನ ಮೊದಲ ಪಂದ್ಯದಲ್ಲೇ ಸ್ಟೊಯಿನಿಸ್ ಉತ್ತಮ ಬ್ಯಾಟಿಂಗ್ ಮಾಡಿದರು. ಪಂದ್ಯವನ್ನು ಕೊನೆಯ ಹಂತದ ವರೆಗೂ ಕೊಂಡೊಯ್ಯಿದರು. ಸ್ಟೊಯಿನಿಸ್ ಕೊನೆಯ ಐದು ಓವರ್ಗಳಲ್ಲಿ ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ತಿಳದಿದೆ. ನಮ್ಮಲ್ಲಿ ಅನೇಕ ಆಲ್ರೌಂಡರ್ಗಳಿದ್ದಾರೆ. ಕೊನೆ ಹಂತದಲ್ಲಿ ನಮ್ಮ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಒಂದು ಸೋಲು ಏನನ್ನು ಬದಲಾವಣೆ ಮಾಡುವುದಿಲ್ಲ. ಇದರಿಂದ ಕಲಿತು ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುತ್ತೇವೆ,” ಎಂಬುದು ರಾಹುಲ್ ಮಾತಾಗಿತ್ತು.
SRH vs GT: ಇಂದು ಕೇನ್ vs ಹಾರ್ದಿಕ್: ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್ರೈಸರ್ಸ್
RR vs LSG: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಕುಲ್ದೀಪ್ ಸೇನ್
Published On - 10:00 am, Mon, 11 April 22