ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದ ದಾವೂದ್; ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದ ಲಲಿತ್ ಮೋದಿ

Lalit Modi, Dawood Ibrahim: ಐಪಿಎಲ್ ಜನಕ ಲಲಿತ್ ಮೋದಿ, ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನಿಂದ ಬಂದ ಕೊಲೆ ಬೆದರಿಕೆಗಳು ಹಾಗೂ ಮ್ಯಾಚ್ ಫಿಕ್ಸಿಂಗ್ ವಿರುದ್ಧದ ತಮ್ಮ ನಿಲುವಿನ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಆರಂಭಿಕ ವರ್ಷಗಳಲ್ಲಿ, ದಾವೂದ್‌ನ ಶತಕೋಟಿ ಡಾಲರ್ ಬೆಟ್ಟಿಂಗ್ ಸಾಮ್ರಾಜ್ಯದ ಮೇಲೆ ಪರಿಣಾಮ ಬೀರಿದ್ದರಿಂದ ಕೊಲೆ ಯತ್ನಗಳು, ಬೆದರಿಕೆಗಳು, ಮತ್ತು ತನ್ನ ಮಗನ ಅಪಹರಣದಂತಹ ಘಟನೆಗಳು ನಡೆದಿದ್ದನ್ನು ಮೋದಿ ವಿವರಿಸಿದ್ದಾರೆ. ಈ ಸಂಘರ್ಷದಿಂದಾಗಿಯೇ ತಾನು ಕ್ರಿಕೆಟ್‌ನಿಂದ ದೂರವಾಗಬೇಕಾಯಿತು ಎಂದಿದ್ದಾರೆ.

ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದ ದಾವೂದ್; ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದ ಲಲಿತ್ ಮೋದಿ
Lalith Modi

Updated on: Jun 04, 2026 | 6:08 PM

ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ದೇಶ ತೊರೆದು ವಿದೇಶದಲ್ಲಿ ನೆಲೆಸಿರುವ ಐಪಿಎಲ್ (IPL) ಜನಕ ಲಲಿತ್ ಮೋದಿ (Lalit Modi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಐಪಿಎಲ್ ಬಗ್ಗೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿರುವ ಲಲಿತ್ ಮೋದಿ, ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧದ ತಮ್ಮ ಅಚಲ ನಿಲುವುಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಅವರ ಗ್ಯಾಂಗ್‌ನಿಂದ ತಮಗೆ ಬಂದಿರುವ ಕೊಲೆ ಬೆದರಿಕೆಗಳ ಬಗ್ಗೆ ಮತ್ತು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಆಘಾತಕ್ಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಶತಕೋಟಿ ಡಾಲರ್ ಬೆಟ್ಟಿಂಗ್

ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್ ಮೋದಿ, ‘ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನಿಂದ ಬಂದ ಕೊಲೆ ಬೆದರಿಕೆಗಳಿಂದಾಗಿ ನಾನು ಕ್ರಿಕೆಟ್​ನಿಂದ ದೂರವಾಗಬೇಕಾಯಿತು. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ನಾನು ಕಠಿಣ ನಿಲುವು ಹೊಂದಿದ್ದ ಕಾರಣದಿಂದಾಗಿ “ಡಿ ಕಂಪನಿ”ಯ ಶತಕೋಟಿ ಡಾಲರ್ ಅಕ್ರಮ ಬೆಟ್ಟಿಂಗ್ ಸಾಮ್ರಾಜ್ಯದ ಮೇಲೆ ನೇರವಾಗಿ ಪರಿಣಾಮ ಬೀರಿತು ಎಂದಿದ್ದಾರೆ.

‘ದಾವೂದ್ ಇಬ್ರಾಹಿಂ ಒಬ್ಬ ಕುಖ್ಯಾತ ಬುಕ್ಕಿ, ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಿಸುತ್ತಿದ್ದವನೇ ಅವನು. ಆ ದಿನಗಳಲ್ಲಿ, ಅದು 2 ಬಿಲಿಯನ್ ಭೂಗತ ಬೆಟ್ಟಿಂಗ್ ವ್ಯವಹಾರವಾಗಿತ್ತು. ಇಂದು, ಅದು ಪ್ರತಿ ಪಂದ್ಯಕ್ಕೆ 4 ಬಿಲಿಯನ್ ಭೂಗತ ಬೆಟ್ಟಿಂಗ್ ವ್ಯವಹಾರವಾಗಿದೆ. ಪ್ರತಿ ಚೆಂಡಿನ ಮೇಲೂ ಬೆಟ್ಟಿಂಗ್ ನಡೆಯುತ್ತದೆ. ಈಗ ಯಾರು ಪಂದ್ಯವನ್ನು ಫಿಕ್ಸ್ ಮಾಡಲು ಹೋಗುವುದಿಲ್ಲ. ಬದಲಿಗೆ, ಓವರ್‌ಗಳನ್ನು ಅಥವಾ ಚೆಂಡುಗಳನ್ನು ಫಿಕ್ಸಿಂಗ್ ಮಾಡಲಾಗುತ್ತದೆ.

ನನ್ನ ಮಗನನ್ನು ಅಪಹರಿಸಲಾಗಿತ್ತು

ನಾನು ಬೆಟ್ಟಿಂಗ್ ವಿರೋಧಿಸಿದಕ್ಕಾಗಿ ಎರಡನೇ ಆವೃತ್ತಿಯ ಐಪಿಎಲ್ ಅನ್ನು ನಡೆಸಲು ಬಿಡುವುದಿಲ್ಲ ಎಂದು ದಾವೂದ್ ಗ್ಯಾಂಗ್ ಬೆದರಿಕೆ ಹಾಕಿತ್ತು. ಹೀಗಾಗಿ ಮುಂಬೈ ಪೊಲೀಸರು ನನ್ನನ್ನು ಝಡ್-ಭದ್ರತೆಯಲ್ಲಿ ಇರಿಸಿದ್ದರು. ಮುಂಬೈನಲ್ಲಿ ನನ್ನ ಮನೆಯ ಹೊರಗೆ ಗುಂಡಿನ ದಾಳಿ ನಡೆಯಿತು, ನಾನು ಕೇಪ್ ಟೌನ್‌ನಲ್ಲಿದ್ದಾಗ ಜೋಹಾನ್ಸ್‌ಬರ್ಗ್‌ನಲ್ಲಿ ನನ್ನ ಮೇಲೆ ಕೊಲೆ ದಾಳಿ ನಡೆಯಿತು. ಮಾಂಟೆನೆಗ್ರೊದಲ್ಲಿ ನನ್ನ ಮೇಲೆ ದಾಳಿ ಮಾಡಲಾಯಿತು. ನನ್ನ ಮಗನನ್ನು ಸಹ ಲಂಡನ್‌ನಲ್ಲಿ ಅಪಹರಿಸಲಾಗಿತ್ತು. ಆದರೆ ನಾನು ಈವರೆಗೆ ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಾನು ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ನನ್ನ ಮೇಲೆ ದಾಳಿಗಳು ನಡೆದವು. ಐಪಿಎಲ್ ಪಂದ್ಯಾವಳಿಯನ್ನು ಸ್ಥಳಾಂತರಿಸಿದರಿಂದ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದವರಿಗೆ ಹೊಡೆತ ಬಿತ್ತು. ಇದರಿಂದ ಅವರಿಗೆ ಸಾಕಷ್ಟು ನಷ್ಟವುಂಟಾಯಿತು. ಹೀಗಾಗಿ ಅವರು ನನ್ನನ್ನು ನಷ್ಟಬರಿಸುವಂತೆ ಒತ್ತಾಯಿಸಿದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಳಿಲ್ಲ.

ಐಪಿಎಲ್ ತಂಡವನ್ನು ಖರೀದಿಸಬೇಕು

2012 ರಲ್ಲಿ ನಾನು ದೇಶ ತೊರೆದು ಲಂಡನ್​ನಲ್ಲಿ ವಾಸಿಸುತ್ತಿದ್ದೆ. ಆಗ ಪ್ರತಿ ಐಪಿಎಲ್ ಪಂದ್ಯದಲ್ಲೂ ಕಾಣಿಸಿಕೊಳ್ಳುವ ಒಬ್ಬ ಲಂಡನ್ ಮೂಲದ ವ್ಯಕ್ತಿಯಿಂದ ನನಗೆ ಬೆಳಗಿನ ಜಾವ 3:30 ಕ್ಕೆ ಕರೆ ಬಂತು. ಆತ ‘ನೀವು ಈಗಲೇ ಬಾಬಾನನ್ನು ಭೇಟಿಯಾಗಬೇಕು’ ಅಂದನು. ಹೀಗಾಗಿ ನಾನು ಬಾಬಾ ಅವರ ಮನೆಗೆ ಹೋದೆ. ನನ್ನೊಂದಿಗೆ ಮಾತಿಗೆ ಕೂತ ಆತ, ಲಲಿತ್ ಜೀ ನೀವು ಈಗಾಗಲೇ ಭಾರತವನ್ನು ತೊರೆದಿದ್ದಿರಿ, ಆದರೆ ನಾವು ಒಂದು ಐಪಿಎಲ್ ತಂಡವನ್ನು ಖರೀದಿಸಬೇಕು ಎಂದುಕೊಂಡಿದ್ದೇವೆ ಎಂದ. ಅದಕ್ಕೆ ನಾನು, ‘ಈಗ ನಾನು ಭಾರತದಲ್ಲಿ ಇಲ್ಲ. ನಿಮಗೆ ಐಪಿಎಲ್ ತಂಡ ಏಕೆ ಬೇಕು? ನೀವು ತಂಡವನ್ನು ಖರೀದಿಸಲು ಬಯಸಿದರೆ, ನೀವು ಬಿಡ್ಡಿಂಗ್ ಮಾಡಿ ಖರೀದಿ ಮಾಡಿ. ಇದಲ್ಲದೆ, ನಾನು ಭಾರತಕ್ಕೆ ಹಿಂತಿರುಗುವುದಿಲ್ಲ. ಅಲ್ಲಿ ನನಗೂ ದಾವೂದ್ ಇಬ್ರಾಹಿಂ ನಡುವೆ ಸಮಸ್ಯೆ ಇದೆ’ ಎಂದು ಹೇಳಿದೆ.

ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಿ

ಅದಕ್ಕೆ ಅವನು ಅದು ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಒಂದು ನಿಮಿಷದಲ್ಲಿ ಪರಿಹರಿಸುತ್ತೇನೆ ಎಂದವನೇ ಮನೆಯ ಟೆರೇಸ್‌ಗೆ ಹೋಗಿ, ತನ್ನ ಸ್ಯಾಟಲೈಟ್ ಫೋನ್ ತೆಗೆದು, ದಾವೂದ್‌ಗೆ ಕರೆ ಮಾಡಿದ. ಇದನ್ನು ನೋಡುತ್ತಿದ್ದ ನನಗೆ ಪ್ಯಾಂಟ್‌ನಲ್ಲೆ ಮೂತ್ರ ಬಂತು. ಆತ ದಾವೂದ್ ಬಳಿ, ದಾವೂದ್ ಬಾಯ್ ಲಲಿತ್ ಬಾಯ್ ಬಂದಿದ್ದಾರೆ ಅವರೊಂದಿಗೆ ಮಾತನಾಡಿ ಎಂದವನೇ ನನಗೆ ಫೋನ್ ನೀಡಲು ಬಂದ. ಆದರೆ ನಾನು ದಾವೂದ್ ಜೊತೆಗೆ ಮಾತನಾಡಲು ನಿರಾಕರಿಸಿದೆ. ಹೀಗಾಗಿ ಆತ ಲೌಡ್ ಸ್ಫೀಕರ್ ಆನ್ ಮಾಡಿದ. ಆ ಕಡೆಯಿಂದ ಮಾತನಾಡಿದ ದಾವೂದ್, ‘ನೀವು ನಮ್ಮ ಸ್ನೇಹಿತ, ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಿ, ಮುಂದೆ ಎಲ್ಲವೂ ಸರಿಯಾಗುತ್ತದೆ’ ಎಂದು ಹೇಳಿ ಫೋನ್ ಕಟ್ ಮಾಡಿದ. ಮನೆಗೆ ಬಂದ ನಾನು ಇದನ್ನ ನನ್ನ ಮಡದಿ ಬಳಿ ಹೇಳಿದೆ. ಆ ಬಳಿಕ ಪೊಲೀಸ್ ಬಳಿಯೂ ಹೇಳಿದೆ. ಇದೆಲ್ಲ ಪೊಲೀಸ್ ರೆಕಾರ್ಡ್​ನಲ್ಲಿ ದಾಖಲಾಗಿದೆ.

ಇದಾದ ಬಳಿಕ ದಾವೂದ್ ಸಂದರ್ಶನವೊಂದರಲ್ಲಿ ಲಲಿತ್ ಮೋದಿ ಜೊತೆಗಿನ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಹೇಳಿದ್ದ. ಆದರೆ ಯಾವುದೇ ಸಮಸ್ಯೆಗಳು ಬಗೆ ಹರಿದಿರಲಿಲ್ಲ. ಅಂತಿಮವಾಗಿ ನಾನು ಕ್ರಿಕೆಟ್​ನಿಂದ ದೂರ ಸರಿಯಲು ನಿರ್ಧರಿಸಿದೆ. ಅದರಂತೆ ಕ್ರಿಕೆಟ್​ನಂತೆ ದೂರಾದೆ. ನಾನು ಕ್ರಿಕೆಟ್​ನಿಂದ ದೂರವಾಗಲು ದಾವೂದ್ ಜೊತೆಗಿನ ಸಂಘರ್ಷ ಪ್ರಮುಖ ಕಾರಣವಾಗಿತ್ತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us