
ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಮಹಿಳಾ ತಂಡ ಹಾಗೂ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ನಾಯಕ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 4 ರನ್ಗಳಿಸಿ ಔಟಾದರೆ, ಆ್ಯಮಿ ಜೋನ್ಸ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೇರಿ ಕೆಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.
ಆ ಬಳಿಕ ಬಂದ ಮರಿಝನ್ನೆ ಕಪ್ 17 ರನ್ ಗಳಿಸಿದರೆ, ಷಾರ್ಲೆಟ್ ಡೀನ್ 14 ರನ್ ಬಾರಿಸಿದರು. ಈ ಮೂಲಕ ಲಂಡನ್ ಸ್ಪಿರಿಟ್ ತಂಡವು 91 ಎಸೆತಗಳಲ್ಲಿ ಕೇವಲ 80 ರನ್ಗಳಿಸಿ ಆಲೌಟ್ ಆಯಿತು.
ಕೇವಲ 81 ರನ್ಗಳ ಗುರಿ ಪಡೆದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು. ಆದರೆ 17 ರನ್ಗಳಿಸಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಸ್ಮೃತಿ ಕ್ಯಾಚ್ ನೀಡಿದರು. ಇನ್ನು ಮೆಗ್ ಲ್ಯಾನಿಂಗ್ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಪೈಜ್ ಸ್ಕೋಲ್ಫೀಲ್ಡ್ ಹಾಗೂ ರಿಚಾ ಘೋಷ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಪೈಜ್ ಸ್ಕೋಲ್ಫೀಲ್ಡ್ 15 ಎಸೆತಗಳಲ್ಲಿ 22 ರನ್ ಬಾರಿಸಿದರೆ, ರಿಚಾ 5 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ನೊಂದಿಗೆ 15 ರನ್ ಚಚ್ಚಿದರು. ಈ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಕೇವಲ 59 ಎಸೆತಗಳಲ್ಲಿ 86 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪಡೆ ದಿ ಹಂಡ್ರೆಡ್ ಲೀಗ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) ಮೇರಿ ಕೆಲ್ಲಿ , ಮರಿಝನ್ನೆ ಕಪ್ , ನಾಡಿನ್ ಡಿ ಕ್ಲರ್ಕ್ , ಡಿಯಾಂಡ್ರಾ ಡಾಟಿನ್ , ಚಾರಿಸ್ ಪಾವೆಲಿ , ಷಾರ್ಲೆಟ್ ಡೀನ್ (ನಾಯಕಿ) , ಕೇಟೀ ಜಾರ್ಜ್ , ಜೋಸಿ ಗ್ರೋವ್ಸ್ , ಹನ್ನಾ ರೈನಿ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಟೀಮ್ ಇಂಡಿಯಾ ಎದುರಾಳಿ ಯಾರು?
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮೆಗ್ ಲ್ಯಾನಿಂಗ್ (ನಾಯಕಿ) , ಸ್ಮೃತಿ ಮಂಧಾನ , ಗ್ರೇಸ್ ಸ್ಕ್ರಿವೆನ್ಸ್ , ಪೈಜ್ ಸ್ಕೋಲ್ಫೀಲ್ಡ್ , ರಿಚಾ ಘೋಷ್ (ವಿಕೆಟ್ ಕೀಪರ್ ), ಮ್ಯಾಡಿ ವಿಲಿಯರ್ಸ್ , ಕ್ಯಾಥರಿನ್ ಬ್ರೈಸ್ , ಮೈಟ್ಲಾನ್ ಬ್ರೌನ್ , ರಿಯಾನಾ ಮ್ಯಾಕ್‌ಡೊನಾಲ್ಡ್-ಗೇ , ಸೋಫಿ ಎಕ್ಲೆಸ್ಟೋನ್ , ಗ್ರೇಸ್ ಬ್ಯಾಲಿಂಗರ್.