ENG vs NZ: 140 ರನ್ಗೆ ಆಂಗ್ಲರನ್ನು ಕಟ್ಟಿಹಾಕಿ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಿವೀಸ್
Eng vs NZ Lord's Test:ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನಲ್ಲಿ ಬೌಲರ್‌ಗಳೇ ಪಾರುಪತ್ಯ ಸಾಧಿಸಿದ್ದಾರೆ. ಮೊದಲ ದಿನ 16 ವಿಕೆಟ್‌ಗಳು ಪತನಗೊಂಡರೆ, ರಾಬಿನ್ಸನ್ ಮತ್ತು ಜೇಮಿಸನ್ ತಲಾ 5 ವಿಕೆಟ್ ಕಬಳಿಸಿ ಮಿಂಚಿದರು. ಇಂಗ್ಲೆಂಡ್ 140 ರನ್ ಗಳಿಸಿದರೆ, ನ್ಯೂಜಿಲೆಂಡ್ 113 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್‌ಗೆ 27 ರನ್‌ಗಳ ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಲಭಿಸಿದ್ದು, ಪಂದ್ಯ ರೋಚಕ ಹಂತ ತಲುಪಿದೆ.

ಪ್ರಸ್ತುತ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ (Eng vs NZ) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್ನಲ್ಲಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Test) ನಡೆಯುತ್ತಿದ್ದು, ಈ ಪಂದ್ಯದಲ್ಲಿ ಇಲ್ಲಿಯವರೆಗೆ ಬೌಲರ್‌ಗಳೇ ಪಾರುಪತ್ಯ ಸಾಧಿಸಿದ್ದಾರೆ. ಪಂದ್ಯದ ಮೊದಲ ದಿನದಂದು ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ದಿನದ ಆಟದ ಅಂತ್ಯದ ವೇಳೆಗೆ ಒಟ್ಟು 16 ವಿಕೆಟ್‌ಗಳು ಬಿದ್ದಿದ್ದವು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 140 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ನ್ಯೂಜಿಲೆಂಡ್ ಕೂಡ ಎರಡನೇ ದಿನದಾಟದ ಮೊದಲ ಸೆಷನ್ನಲ್ಲಿಯೇ 113 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
7 ಆಟಗಾರರು ಒಂದಂಕಿಗೆ ಔಟ್
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 140 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ತಂಡವನ್ನು ಇಂಗ್ಲೆಂಡ್ ವೇಗಿ ಆಲಿ ರಾಬಿನ್ಸನ್ ಇನ್ನಿಲ್ಲದಂತೆ ಕಾಡಿದರು. ಆಲಿ ರಾಬಿನ್ಸನ್ ಆರಂಭದಲ್ಲೇ ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರರನ್ನು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು. ಈ ವಿಕೆಟ್ಗಳ ಪತನದ ನಂತರ ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ಸುಧಾರಿಸಲಿಲ್ಲ. ಕಿವೀಸ್ ಪರ ಕೈಲ್ ಜೇಮಿಸನ್ ಅತ್ಯಧಿಕ 38 ರನ್‌ಗಳ ಇನ್ನಿಂಗ್ಸ್ ಆಡಿದರೆ, ಗ್ಲೆನ್ ಫಿಲಿಫ್ಸ್ 34 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರಿಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ 7 ಆಟಗಾರರು ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು.
ಇತ್ತ ಕಿವೀಸ್ ಬ್ಯಾಟಿಂಗ್ ಬೆನ್ನೇಲುಬು ಮುರಿದ ರಾಬಿನ್ಸನ್, ಈ ಇನ್ನಿಂಗ್ಸ್‌ನಲ್ಲಿ ಒಟ್ಟು 10.5 ಓವರ್‌ಗಳನ್ನು ಬೌಲ್ ಮಾಡಿ 39 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಪರಿಣಾಮವಾಗಿ, ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್‌ಗಳ ಮುನ್ನಡೆ ಸಾಧಿಸಿತು. ಓಲಿ ರಾಬಿನ್ಸನ್ ಜೊತೆಗೆ, ಜೋಶ್ ಟಾಂಗ್ ಕೂಡ ಅದ್ಭುತ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆದರು. ಗಸ್ ಅಟ್ಕಿನ್ಸನ್ ಕೂಡ ಎರಡು ವಿಕೆಟ್‌ಗಳನ್ನು ಪಡೆದರು.
ವಿಶ್ವ ಕ್ರಿಕೆಟ್ನಲ್ಲಿ ಈಗ ವೈಭವ್ದೇ ಮಾತು; ಟೆಸ್ಟ್ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು
5 ವಿಕೆಟ್ ಪಡೆದ ಜೇಮಿಸನ್
ಇದಕ್ಕೂ ಮೊದಲು, ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಕೈಲ್ ಜೇಮಿಸನ್ ಮಿಂಚಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕಿವೀಸ್ ವೇಗಿ ಕೈಲ್ ಜೇಮಿಸನ್ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ನೆಲೆ ನಿಲ್ಲಲು ಯಾವುದೇ ಅವಕಾಶ ನೀಡಲಿಲ್ಲ. ಜೇಮಿಸನ್ ಅದ್ಭುತ ಬೌಲಿಂಗ್ ಮಾಡಿ 62 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ ಹ್ಯಾರಿ ಬ್ರೂಕ್ ಅವರ 56 ರನ್‌ಗಳ ಇನ್ನಿಂಗ್ಸ್ನಿಂದಾಗಿ ಇಂಗ್ಲೆಂಡ್ 140 ರನ್ ಕಲೆಹಾಕಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




