
ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಾಸ್ ಏಂಜಲಿಸ್ ನೈಟ್ ರೈಡರ್ಸ್ (LAKR) ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಓಕ್ಲಾಂಡ್ನ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಡಿದ ವಾಷಿಂಗ್ಟನ್ ಫ್ರೀಡಂ ತಂಡವು ಒಂದು ರನ್ನಿಂದ ಸೋಲೊಪ್ಪಿಕೊಂಡಿತು. ಇತ್ತ ಈ ಒಂದು ರನ್ನ ರೋಚಕ ಜಯದೊಂದಿಗೆ ನೈಟ್ ರೈಡರ್ಸ್ ತಂಡವು ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಾಸ್ ಏಂಜಲಿಸ್ ನೈಟ್ ರೈಡರ್ಸ್ ತಂಡ 19.4 ಓವರ್ಗಳಲ್ಲಿ 164 ರನ್ಗಳಿಗೆ ಆಲೌಟ್ ಆಗಿತ್ತು. ಆರಂಭಿಕ ಆಟಗಾರ ಆ್ಯಂಡ್ರೆ ಫ್ಲೆಚರ್ (47 ರನ್, 27 ಎಸೆತ) ಮತ್ತು ಕಾಲಿನ್ ಮನ್ರೊ (40 ರನ್, 29 ಎಸೆತ) ಉತ್ತಮ ಆರಂಭ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಟ್ರಾಂಪ್ ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 39 ರನ್ ಸಿಡಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ವಾಷಿಂಗ್ಟನ್ ಫ್ರೀಡಂ ಪರ ಬೆನ್ ಡ್ವಾರ್ಶುಯಿಸ್ 31 ರನ್ಗಳಿಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
165 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ನೈಟ್ ರೈಡರ್ಸ್ ಶಿಸ್ತುಬದ್ಧ ಬೌಲಿಂಗ್ ಆಘಾತ ನೀಡಿತು. ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಕೇವಲ 13 ರನ್ ನೀಡಿ 3 ಪ್ರಮುಖ ವಿಕೆಟ್ (ಸ್ಟೀವ್ ಸ್ಮಿತ್, ಮಿಚೆಲ್ ಓವನ್, ರಚಿನ್ ರವೀಂದ್ರ) ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದ್ದರು.
ನರೈನ್ಗೆ ಉತ್ತಮ ಉತ್ತಮ ಸಾಥ್ ನೀಡಿದ ನಾಯಕ ಜೇಸನ್ ಹೋಲ್ಡರ್ 31 ರನ್ಗಳಿಗೆ 3 ವಿಕೆಟ್ ಕಿತ್ತರು. ಇದಾಗ್ಯೂ ವಾಷಿಂಗ್ಟನ್ ಪರ ಓಬಸ್ ಪೀಟರ್ಸ್ (53 ರನ್, 24 ಎಸೆತ) ಮತ್ತು ಆಂಡ್ರೈಸ್ ಗೌಸ್ (40 ರನ್) ಗೆಲುವಿಗಾಗಿ ಹೋರಾಟ ಮುಂದುವರೆಸಿದ್ದರು.
ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 14 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ಓಬಸ್ ಪೀಟರ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಪಂದ್ಯವನ್ನು ವಾಷಿಂಗ್ಟನ್ ಕಡೆಗೆ ತಿರುಗಿಸಿದರು. ಆದರೆ, ನೈಟ್ ರೈಡರ್ಸ್ ಬೌಲರ್ ಶಾಡ್ಲಿ ವ್ಯಾನ್ ಶಾಲ್ಕ್ವಿಕ್ ಅದ್ಭುತವಾಗಿ ಕಂಬ್ಯಾಕ್ ಮಾಡಿದರು.
ಪರಿಣಾಮ ಮುಂದಿನ ಐದು ಎಸೆತಗಳಲ್ಲಿ ಮೂರು ವಿಕೆಟ್ ಪತನಗೊಂಡವು. ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸುವ ಯತ್ನದಲ್ಲಿ ಲಾಹೀರು ಮಿಲಂತ ರನ್ ಔಟ್ ಆದರು. ಇದರೊಂದಿಗೆ 163 ರನ್ಗಳೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡದ ಇನಿಂಗ್ಸ್ ಅಂತ್ಯವಾಯಿತು. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಕೇವಲ 1 ರನ್ನ ಐತಿಹಾಸಿಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪ್ಲೇಯಿಂಗ್ 11: ಕಾಲಿನ್ ಮನ್ರೊ, ಆ್ಯಂಡ್ರೆ ಫ್ಲೆಚರ್, ಆ್ಯಂಡ್ರೆ ರಸೆಲ್, ಮ್ಯಾಥ್ಯೂ ಟ್ರಾಂಪ್, ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್ (ನಾಯಕ), ಸೈಫ್ ಬದರ್, ಜಹ್ಮಾರ್ ಹ್ಯಾಮಿಲ್ಟನ್, ಸುನಿಲ್ ನರೈನ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಅಲಿ ಖಾನ್.
ಇದನ್ನೂ ಓದಿ: ವಿಶ್ವಕಪ್ ಗೆದ್ದರೆ ನಿವೃತ್ತಿ: ಯುವ ಆಟಗಾರನ ಘೋಷಣೆ!
ವಾಷಿಂಗ್ಟನ್ ಫ್ರೀಡಂ ಪ್ಲೇಯಿಂಗ್ 11: ಮಿಚೆಲ್ ಓವನ್, ಸ್ಟೀವ್ ಸ್ಮಿತ್ (ನಾಯಕ), ರಚಿನ್ ರವೀಂದ್ರ, ಆಂಡ್ರೈಸ್ ಗೌಸ್, ಲಾಹೀರು ಮಿಲಂತ, ನಿಖಿಲ್ ಚೌಧರಿ, ಬೆನ್ ಡ್ವಾರ್ಶುಯಿಸ್, ಇಯಾನ್ ಹಾಲೆಂಡ್, ಓಬಸ್ ಪೀಟರ್ಸ್, ಸೌರಭ್ ನೇತ್ರಾವಲ್ಕರ್, ಲಾಕಿ ಫರ್ಗುಸನ್.