ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ (Maharaja Trophy 2022) ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal )ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬೆಂಗಳೂರು ಬ್ಲಾಸ್ಟರ್ಸ್ ಪರ ಇನಿಂಗ್ಸ್ ಆರಂಭಿಸಿದ ಮಯಾಂಕ್ ಹಾಗೂ ಆರ್ ಚೇತನ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.
ಈ ಹಂತದಲ್ಲಿ 25 ರನ್ಗಳಿಸಿ ಚೇತನ್ ಔಟಾದರು. ಆದರೆ ಮತ್ತೊಂದೆಡೆ ನಾಯಕನ ಆಟ ಪ್ರದರ್ಶಿಸಿದ ಮಯಾಂಕ್ ಅಗರ್ವಾಲ್ ಸ್ಪೋಟಕ ಇನಿಂಗ್ಸ್ ಆಡಿದರು. ಪರಿಣಾಮ ಕೇವಲ 25 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ನೊಂದಿಗೆ 52 ರನ್ ಚಚ್ಚಿದರು. ಅರ್ಧಶತಕದ ಬೆನ್ನಲ್ಲೇ ರನೌಟ್ ಆಗುವ ಮೂಲಕ ಮಯಾಂಕ್ ಕೂಡ ನಿರ್ಗಮಿಸಿದರು. ಮತ್ತೊಂದೆಡೆ ಅನೀಶ್ (44) ಹಾಗೂ ಕ್ರಾಂತಿ ಕುಮಾರ್ (22) ಅವರ ಉತ್ತಮ ಕಾಣಿಕೆಯೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ದೇವದತ್ ಪಡಿಕ್ಕಲ್ (18), ಶ್ರೀಜಿತ್ (25) ಹಾಗೂ ಮನೋಜ್ ಭಂಡಗೆ (35) ರನ್ಗಳಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 19.1 ಓವರ್ಗಳಲ್ಲಿ ಗುಲ್ಬಾರ್ಗ ತಂಡವು 135 ರನ್ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ ಮಯಾಂಕ್ ಅಗರ್ವಾಲ್ ಪಡೆಯು 54 ರನ್ಗಳ ಭರ್ಜರಿ ಜಯ ಸಾಧಿಸಿತು.
ಬೆಂಗಳೂರು ಬ್ಲಾಸ್ಟರ್ಸ್ ಪರ ರೋನಿತ್ ಮೋರೆ 4 ವಿಕೆಟ್ ಕಬಳಿಸಿದರೆ, ಎಲ್ ಕುಮಾರ್ ಹಾಗೂ ರಿಷಿ ಬೋಪಣ್ಣ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದ ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಶೇಷ ಎಂದರೆ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಮಯಾಂಕ್ ಅಗರ್ವಾಲ್ ಹಲವು ಬಾರಿ ಟೀಮ್ ಇಂಡಿಯಾ ಟಿ20 ತಂಡದಿಂದ ಅವಕಾಶ ವಂಚಿತರಾಗಿದ್ದಾರೆ. ಇದೀಗ ಏಷ್ಯಾಕಪ್ ತಂಡದ ಆಯ್ಕೆಯ ಬೆನ್ನಲ್ಲೇ ದೇಶೀಯ ಅಂಗಳದಲ್ಲಿ ಅಬ್ಬರಿಸುವ ಮೂಲಕ ಮಯಾಂಕ್ ಅಗರ್ವಾಲ್ ಎಲ್ಲರ ಗಮನ ಸೆಳೆದಿರುವುದು ವಿಶೇಷ.