ಐಪಿಎಲ್ ಮೆಗಾ ಹರಾಜು ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇದೀಗ ದೇಶಿ ಆಟಗಾರರ ಹಾಗೂ ಬ್ಯಾಕ್ ಅಪ್ ಆಟಗಾರರ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ. ಇನ್ನು ನೆನ್ನಿಯಿಂದ ನಡೆಯುತ್ತಿರುವ ಈ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಗತ್ಯವಿರುವ ಆಟಗಾರರ ಖರೀದಿಯ ಜೊತೆಗೆ ಸ್ಥಳೀಯ ಆಟಗಾರರ ಅಂದರೆ ಆ ತಂಡ ಪ್ರತಿನಿಧಿಸುವ ರಾಜ್ಯದ ಯುವ ಪ್ರತಿಭಾನ್ವೀತ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿಸಿವೆ. ಆದರೆ ಆರ್ಸಿಬಿ ಮಾತ್ರ ಆದ್ಯಾಕೋ ನಿನ್ನೆಯಿಂದಲೂ ಈ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೀಗ ಹರಾಜಿನ ಕೊನೆಯ ದಿನದಂದು ಕನ್ನಡಿಗನನ್ನು ಖರೀದಿಸಲು ಆರ್ಸಿಬಿ ಮನಸು ಮಾಡಿದೆ. ಅದರಂತೆ ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಅವರನ್ನು ಮತ್ತೆ ಖರೀದಿಸುವ ಕೆಲಸವನ್ನು ಆರ್ಸಿಬಿ ಮಾಡಿದೆ.
ವಾಸ್ತವವಾಗಿ ಮನೋಜ್ ಭಾಂಡಗೆ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ. ಈ ಎರಡೂ ಆವೃತ್ತಿಗಳಲ್ಲೂ ಮನೋಜ್ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.
ಆದರೀಗ ಮನೋಜ್ ಮೇಲೆ ಮತ್ತೆ ಬಿಡ್ ಮಾಡಿರುವ ಆರ್ಸಿಬಿ ಅವರ ಮೂಲ ಬೆಲೆ 30 ಲಕ್ಷಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ವಾಸ್ತವವಾಗಿ ಮನೋಜ್ಗೂ ಮೊದಲು ಕರ್ನಾಟಕದ ಹಲವು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರು. ಆದರೆ ಆರ್ಸಿಬಿ, ಅವರಲ್ಲಿ ಯಾರನ್ನು ಖರೀದಿಸುವ ಮನಸು ಮಾಡಲಿಲ್ಲ. ಹೀಗಾಗಿ ಆರ್ಸಿಬಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಕನ್ನಡಿಗರ ಕಣ್ಣೊರೆಸುವ ಕೆಲಸಕ್ಕೆ ಮುಂದಾಗಿರುವ ಆರ್ಸಿಬಿ, ಏಕೈಕ ಕನ್ನಡಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಆರ್ಸಿಬಿ ಈ ಖರೀದಿ ಮಾಡಲು ಕಾರಣವೂ ಇದ್ದು, ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯವಾಗಿತ್ತು. ಏಕೆಂದರೆ ಈ ಟೂರ್ನಿಯಲ್ಲಿ ಮೈಸೂರು ಪರ ಆಡಿದ 12 ಪಂದ್ಯಗಳಿಂದ ಮನೋಜ್, 25 ಸಿಕ್ಸರ್ಗಳ ಸಹಿತ 292 ರನ್ ಕಲೆಹಾಕಿದ್ದರು.
ಹಾಗೆಯೇ ಮಹಾರಾಜ ಟ್ರೋಫಿ 2024 ರಲ್ಲಿ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಖ್ಯಾತಿಗೂ ಮನೋಜ್ ಭಾಂಡಗೆ ಪಾತ್ರರಾಗಿದ್ದರು. ಹೀಗಾಗಿ ಆರ್ಸಿಬಿ, ಮನೋಜ್ರನ್ನು ಖರೀದಿಸುವ ಕೆಲಸಕ್ಕೆ ಮುಂದಾಗಿದೆ. ಆದರೆ ಕಳೆದ ಎರಡು ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಮನೋಜ್ರನ್ನು ಬೆಂಚ್ ಮೇಲೆ ಕೂರಿಸುವ ಕೆಲಸವನ್ನು ಆರ್ಸಿಬಿ ಕೈಬಿಡಬೇಕು. ತಂಡದಲ್ಲಿರುವ ಏಕೈಕ ಕನ್ನಡಿಗ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆಯುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ