ಕೈ ತಪ್ಪಿದ ಕಪ್… ಮೈದಾನದಲ್ಲಿ ಕಣೀರಿಟ್ಟ ಮರಿಝನ್ನೆ ಕಪ್
Womens Premier League 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೂರು ಬಾರಿ ಫೈನಲ್ಗೆ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ಸಲನೂ ಸೋತಿದೆ. ಮೊದಲ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪರಾಜಯಗೊಂಡಿದ್ದ ಡೆಲ್ಲಿ ಪಡೆ ಎರಡನೇ ಸೀಸನ್ನಲ್ಲಿ ಆರ್ಸಿಬಿ ವಿರುದ್ಧ ಮುಗ್ಗರಿಸಿತ್ತು. ಇದೀಗ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನ ಮೂರನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನಾಯಕ ಹರ್ಮನ್ಪ್ರೀತ್ ಕೌರ್ 44 ಎಸೆತಗಳಲ್ಲಿ 9 ಫೋರ್ ಹಾಗೂ 2 ಸಿಕ್ಸ್ ಒಳಗೊಂಡಂತೆ 66 ರನ್ ಬಾರಿಸಿದರು.
ಇನ್ನು ನ್ಯಾಟ್ ಸಿವರ್-ಬ್ರಂಟ್ 30 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಮರಿಝನ್ನೆ ಕಪ್ 4 ಓವರ್ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
150 ರನ್ಗಳ ಗುರಿ:
20 ಓವರ್ಗಳಲ್ಲಿ 150 ರನ್ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಅಲ್ಲದೆ ಕೇವಲ 66 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮರಿಝನ್ನೆ ಕಪ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಬಿರುಸಿನ ಬ್ಯಾಟಿಂಗ್ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ ಮರಿಝನ್ನೆ ಕೇವಲ 26 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 40 ರನ್ ಸಿಡಿಸಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 14 ರನ್ಗಳು ಬೇಕಿತ್ತು.
ಈ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ನ್ಯಾಟ್ ಸಿವರ್-ಬ್ರಂಟ್ ಕೇವಲ 5 ರನ್ ಮಾತ್ರ ನೀಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ 8 ರನ್ಗಳ ಜಯ ತಂದುಕೊಟ್ಟರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕಣ್ಣೀರಿಟ್ಟ ಮರಿಝನ್ನೆ ಕಪ್:
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೂರನೇ ಬಾರಿ ಕಪ್ ಕೈ ತಪ್ಪುತ್ತಿದ್ದಂತೆ ಇತ್ತ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ನೀಡಿದ ಮರಿಝನ್ನೆ ಕಪ್ ಮೈದಾನದಲ್ಲೇ ಬಿಕ್ಕಳಿಸಿ ಅತ್ತರು. ಅಲ್ಲದೆ ಪ್ರಶಸ್ತಿ ಸಮಾರೋಪ ಸಮಾರಂಭದ ವೇಳೆಯೂ ಮರಿಝನ್ನೆ ಕಣ್ಣೀರಿಡುತ್ತಿರುವುದು ಕಂಡು ಬಂತು.
Marizanne Kapp crying when Delhi Capitals Lost the Final.
– FEEL FOR KAPP..!!!! 💔 pic.twitter.com/2IfSiWhOKu
— Tanuj Singh (@ImTanujSingh) March 15, 2025
ಏಕೆಂದರೆ ಕಳೆದ ಮೂರು ಸೀಸನ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ಗೆ ಪ್ರವೇಶಿಸಿದರೂ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಡೆಲ್ಲಿ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿದೆ. ಇತ್ತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಎಡವಿದ ಹಿರಿಯ ಆಟಗಾರ್ತಿ ಮರಿಝನ್ನೆ ಕಪ್ ಅದೇ ನೋವಿನಲ್ಲಿ ಕಣ್ಣೀರಿಟ್ಟರು.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಇದೀಗ ಸೌತ್ ಆಫ್ರಿಕಾ ಆಲ್ರೌಂಡರ್ ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದ ಬಳಿಕ ಕಣ್ಣೀರಿಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.