
ಕನ್ನಡಿಗ ಮಯಾಂಕ್ ಅಗರ್ವಾಲ್ ( Mayank Agarwal) ಟೀಂ ಇಂಡಿಯಾದಲ್ಲಿ ವರ್ಷಗಳೇ ಕಳೆದಿವೆ. 2022 ರ ಮಾರ್ಚ್ನಲ್ಲಿ ಮಯಾಂಕ್ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅದಾದ ಬಳಿಕ ಮಯಾಂಕ್‌ಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಆದಾಗ್ಯೂ ತಮ್ಮ ಹೋರಾಟ ಬಿಡಿದ ಮಯಾಂಕ್ ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಇದೀಗ ಇಂಗ್ಲೆಂಡ್ ನೆಲದಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ವಾಸ್ತವವಾಗಿ ಮಯಾಂಕ್ ಅಗರ್ವಾಲ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಪಡೆದಿದ್ದಾರೆ. 35 ವರ್ಷದ ಮಯಾಂಕ್ ಡರ್ಹಾಮ್ ಕ್ರಿಕೆಟ್ ಕ್ಲಬ್‌ನೊಂದಿಗೆ ಸಹಿ ಹಾಕಿದ್ದಾರೆ. ಈ ಆವೃತ್ತಿಯ ಕೌಂಟಿ ಚಾಂಪಿಯನ್‌ಶಿಪ್‌ನ ಉಳಿದ ಪಂದ್ಯಗಳಲ್ಲಿ ಮಯಾಂಕ್ ತಂಡದ ಪರ ಆಡಲಿದ್ದಾರೆ. ಡರ್ಹಾಮ್ ಪ್ರಸ್ತುತ ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್ ಟುನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡವು ಇಲ್ಲಿಯವರೆಗೆ ಆಡಿದ 10 ಪಂದ್ಯಗಳಲ್ಲಿ ಏಳನ್ನು ಗೆದ್ದಿದ್ದು, ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾದ ರೆಡ್-ಬಾಲ್ ಸೀಸನ್‌ನಿಂದಾಗಿ ಈ ವಾರ ತವರಿಗೆ ಮರಳುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಬೆಡಿಂಗ್‌ಹ್ಯಾಮ್ ಬದಲಿಗೆ ಮಾಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಯಾಂಕ್ ಈ ಹಿಂದೆ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2025 ರ ಆವೃತ್ತಿಯ ಕೊನೆಯ ಮೂರು ಪಂದ್ಯಗಳಲ್ಲಿ ಅವರು ಯಾರ್ಕ್‌ಷೈರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ, ಇಂಗ್ಲಿಷ್ ಪರಿಸ್ಥಿತಿಗಳು ಅವರಿಗೆ ಸಂಪೂರ್ಣವಾಗಿ ಹೊಸದಲ್ಲ.
Ranji Final: ಗಂಡು ಮೆಟ್ಟಿದ ನಾಡಿನಲ್ಲಿ ಕೆಚ್ಚೆದೆಯ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್
ಇನ್ನು ಟೀಂ ಇಂಡಿಯಾ ಪರ 2018 ಮತ್ತು 2021 ರ ನಡುವೆ ಮಯಾಂಕ್ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ನಾಲ್ಕು ಶತಕಗಳು ಸೇರಿದಂತೆ 41.33 ರ ಸರಾಸರಿಯಲ್ಲಿ 1,488 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 243 ರನ್ ಆಗಿದೆ. ಈ ಮೊತ್ತವನ್ನು ಮಯಾಂಕ್ 2019 ರಲ್ಲಿ ಇಂದೋರ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕಲೆಹಾಕಿದ್ದರು. ಮಯಾಂಕ್ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮಯಾಂಕ್ ಕರ್ನಾಟಕ ಪರ ಒಂದು ಶತಕ ಸೇರಿದಂತೆ 678 ರನ್ ಕಲೆಹಾಕಿದ್ದಾರೆ.