MLC 2024: ಕನ್ನಡಿಗನ ಸಿಡಿಲಬ್ಬರದ ಬ್ಯಾಟಿಂಗ್; ವ್ಯರ್ಥವಾಯ್ತು ಸ್ಮಿತ್- ಹೆಡ್ ಅರ್ಧಶತಕ
MLC 2024: ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ 21 ವರ್ಷದ ಸಂಜಯ್ ಕೃಷ್ಣಮೂರ್ತಿ ಕೊನೆಯವರೆಗೂ ಅಜೇಯರಾಗಿ ಉಳಿದು, ಕೇವಲ 42 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡ 79 ರನ್ ಸಿಡಿಸಿದರು. ಇನ್ನೊಂದು ತುದಿಯಿಂದ ಅವರಿಗೆ ಬೆಂಬಲ ನೀಡಿದ ಜೋಸ್ ಇಂಗ್ಲಿಷ್ ಕೂಡ 6 ಸಿಕ್ಸರ್ ಬಾರಿಸಿ ಕೇವಲ 17 ಎಸೆತಗಳಲ್ಲಿ 45 ರನ್ ಗಳಿಸಿದರು.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2024 ರ 20 ನೇ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಹಾಗೂ ವಾಷಿಂಗ್ಟನ್ ಫ್ರೀಡಮ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದ ವಾಷಿಂಗ್ಟನ್ ಫ್ರೀಡಮ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡ ಯಶಸ್ವಿಯಾಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 15.3 ಓವರ್‌ಗಳಲ್ಲಿ 3 ವಿಕೆಟ್‌ಗೆ 174 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ 14 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
ಸ್ಮಿತ್- ಹೆಡ್ ಅರ್ಧಶತಕ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡಕ್ಕೆ ಶತಕದ ಜೊತೆಯಾಟ ದೊರಕಿತು. ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಮೊದಲ ವಿಕೆಟ್‌ಗೆ 101 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ನಾಯಕ ಸ್ಮಿತ್ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಟ್ರಾವಿಸ್ ಹೆಡ್ ಕೂಡ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 56 ರನ್ಗಳ ಕಾಣಿಕೆ ನೀಡಿದರು. ಈ ಇಬ್ಬರ ಸಿಡಿಲಬ್ಬರದ ಬ್ಯಾಟಿಂಗ್ನಿಂದ ತಂಡ ಕೇವಲ 9.4 ಓವರ್‌ಗಳಲ್ಲಿ ಶತಕದ ಗಡಿ ದಾಟಿತು.
ಆ ನಂತರ ಬಂದ ಆಂಡ್ರೀಸ್ ಗೌಸ್ 29 ರನ್ ಹಾಗೂ ರಚಿನ್ ರವೀಂದ್ರ ಅವರ 19 ರನ್ಗಳ ಕೊಡುಗೆಯಿಂದಾಗಿ ತಂಡ 3 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು 15.3 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ಯುನಿಕಾರ್ನ್ಸ್ ತಂಡಕ್ಕೆ ಆರಂಭಿಕ ಆಘಾತ
173 ರನ್ಗಳ ಗುರಿ ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡದ ಇನ್ನಿಂಗ್ಸ್ಗೂ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು 14 ಓವರ್ಗಳಿಗೆ ಸೀಮಿತಗೊಳಿಸಿ ಗೆಲುವಿಗೆ 177 ರನ್ ಟಾರ್ಗೆಟ್ ನೀಡಲಾಯಿತು. ಆದರೆ ಯುನಿಕಾರ್ನ್ಸ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಏಕೆಂದರೆ ಆರಂಭಿಕ ಫಿನ್ ಅಲೆನ್ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿದರು. ಹೀಗಾಗಿ ವಾಷಿಂಗ್ಟನ್ ಫ್ರೀಡಂ ತಂಡದ ಗೆಲುವಿನ ಹಾದಿ ಸುಲಭವೆನಿಸಿತು. ಇದಕ್ಕೆ ಪೂರಕವಾಗಿ ಜಾಕ್ ಫೇಗರ್ ಮೆಕ್‌ಗುರ್ಕ್ ಕೂಡ ಬೇಗನೆ ಔಟಾದರು. ಈ ವೇಳೆ ತಂಡದ ಸ್ಕೋರ್ 4.4 ಓವರ್ ಗಳಲ್ಲಿ 2 ವಿಕೆಟ್‌ಗೆ 45 ರನ್ ಆಗಿತ್ತು. ಆದರೆ ಆ ನಂತರ ಬಂದ ಕನ್ನಡಿಗ ಸಂಜಯ್ ಕೃಷ್ಣಮೂರ್ತಿ ಸ್ಮಿತ್ ಪಡೆಯ ಗೆಲುವಿನ ಹಾದಿಗೆ ಮುಳ್ಳಾಗಿದಲ್ಲದೆ, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಂಜಯ್ಗೆ ಜೋಶ್ ಇಂಗ್ಲಿಸ್ ಅವರ ಸಾಥ್ ಕೂಡ ಸಿಕ್ಕಿತು. ಈ ಇಬ್ಬರು ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡವನ್ನು ಜಯದ ದಡ ಸೇರಿಸಿದರು.
42 ಎಸೆತಗಳಲ್ಲಿ ಅಜೇಯ 79 ರನ್
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ 21 ವರ್ಷದ ಸಂಜಯ್ ಕೃಷ್ಣಮೂರ್ತಿ ಕೊನೆಯವರೆಗೂ ಅಜೇಯರಾಗಿ ಉಳಿದು, ಕೇವಲ 42 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡ 79 ರನ್ ಸಿಡಿಸಿದರು. ಇನ್ನೊಂದು ತುದಿಯಿಂದ ಅವರಿಗೆ ಬೆಂಬಲ ನೀಡಿದ ಜೋಸ್ ಇಂಗ್ಲಿಷ್ ಕೂಡ 6 ಸಿಕ್ಸರ್ ಬಾರಿಸಿ ಕೇವಲ 17 ಎಸೆತಗಳಲ್ಲಿ 45 ರನ್ ಗಳಿಸಿದರು.
A star is born 🌟#SFUnicorns #GoCorns #MLC2024 #CognizantMajorLeagueCricket #WFvSFU pic.twitter.com/hLUVrMouTM
— San Francisco Unicorns (@SFOUnicorns) July 23, 2024
ಕರ್ನಾಟಕ ಮೂಲದ ಸಂಜಯ್
ಈಗ ಪ್ರಶ್ನೆ ಏನೆಂದರೆ, ಅಮೆರಿಕದಲ್ಲಿ ಕ್ರಿಕೆಟ್ ಆಡುತ್ತಿರುವ ಸಂಜಯ್ ಕೃಷ್ಣಮೂರ್ತಿಗೂ ಕರ್ನಾಟಕಕ್ಕೂ ಏನು ಸಂಬಂಧ?. 21ರ ಹರೆಯದ ಈ ಆಲ್ರೌಂಡರ್ ಅಮೆರಿಕದಲ್ಲಿ ಜನಿಸಿದರಾದರೂ, ಕರ್ನಾಟಕ ಅಂಡರ್-16 ತಂಡದ ಪರ ಕ್ರಿಕೆಟ್ ಆಡಿದ್ದಾರೆ. ಆದರೆ ಅವರ ಕುಟುಂಬ ಅಮೆರಿಕದಲ್ಲಿ ನೆಲೆಸಿದ್ದರಿಂದ ಅವರು ಅಮೆರಿಕದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Tue, 23 July 24