MLC 2025: ಡು ಪ್ಲೆಸಿಸ್ ಸ್ಫೋಟಕ ಶತಕ, ಪ್ಲೇಆಫ್​ಗೇರಿದ ಸೂಪರ್ ಕಿಂಗ್ಸ್; ಮುಂಬೈಗೆ 5ನೇ ಸೋಲು

MLC 2025: ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ವಿರುದ್ಧ 39 ರನ್‌ಗಳ ಭರ್ಜರಿ ಜಯ ಸಾಧಿಸಿ ಮೇಜರ್ ಲೀಗ್ ಕ್ರಿಕೆಟ್ (MLC) ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಫಾಫ್ ಡು ಪ್ಲೆಸಿಸ್ ಅವರ ಅಜೇಯ 103 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಟೆಕ್ಸಾಸ್ 223 ರನ್‌ಗಳನ್ನು ಗಳಿಸಿತು. ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಕೀರಣ್ ಪೊಲಾರ್ಡ್ ಅವರ 70 ರನ್‌ಗಳ ಹೋರಾಟದ ಹೊರತಾಗಿಯೂ ಗುರಿ ತಲುಪಲು ವಿಫಲವಾಯಿತು. ಪೊಲಾರ್ಡ್ MLCಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಸೃಷ್ಟಿಸಿದರು.

MLC 2025: ಡು ಪ್ಲೆಸಿಸ್ ಸ್ಫೋಟಕ ಶತಕ, ಪ್ಲೇಆಫ್​ಗೇರಿದ ಸೂಪರ್ ಕಿಂಗ್ಸ್; ಮುಂಬೈಗೆ 5ನೇ ಸೋಲು
Texas Super Kings

Updated on: Jun 30, 2025 | 3:09 PM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (MLC 2025) ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ (Texas Super Kings) ತಂಡ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ. ಲೀಗ್​ನ 21ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ( Mumbai Indians New York) ತಂಡವನ್ನು 39 ರನ್​ಗಳಿಂದ ಸೋಲಿಸುವ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸತತ ಮೂರನೇ ಬಾರಿಗೆ ಪ್ಲೇಆಫ್‌ಗೆ ತಲುಪಿದ ಸಾಧನೆ ಮಾಡಿದೆ. ಇತ್ತ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿದೆ.

ಡು ಪ್ಲೆಸಿಸ್ ಶತಕ, 223 ರನ್ ಗುರಿ

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿತು. ತಂಡದ ಪರ ನಾಯಕ ಫಾಫ್ ಡು ಪ್ಲೆಸಿಸ್ ಒಬ್ಬರೇ ಅಜೇಯ 103 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 53 ಎಸೆತಗಳನ್ನು ಎದುರಿಸಿದ ಫಾಫ್, 9 ಸಿಕ್ಸರ್ ಮತ್ತು 5 ಬೌಂಡರಿ ಸಹ ಬಾರಿಸಿದರು. ಇದು MLC 2025 ರಲ್ಲಿ ಫಾಫ್ ಡು ಪ್ಲೆಸಿಸ್ ಅವರ ಬ್ಯಾಟ್‌ನಿಂದ ದಾಖಲಾದ ಎರಡನೇ ಶತಕವಾಗಿದೆ. ಇನ್ನು ಈ ಪಂದ್ಯದಲ್ಲಿ ಡು ಪ್ಲೆಸಿಸ್ ಎರಡನೇ ವಿಕೆಟ್‌ಗೆ ಮುಕ್ಕಮಲ್ಲ ಅವರೊಂದಿಗೆ 80 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರೆ, ಮೂರನೇ ವಿಕೆಟ್‌ಗೆ ಸ್ಟೊಯಿನಿಸ್ ಅವರೊಂದಿಗೆ 57 ರನ್‌ಗಳ ಜೊತೆಯಾಟ ನಡೆಸಿದರು. ಹಾಗೆಯೇ ನಾಲ್ಕನೇ ವಿಕೆಟ್‌ಗೆ ಡ್ವೇನ್ ಫೆರೇರಾ ಅವರೊಂದಿಗೆ ಕೇವಲ 29 ಎಸೆತಗಳಲ್ಲಿ 81 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

IPL 2025: ಮುಂಬೈ ವಿರುದ್ಧ ಕಣಕ್ಕಿಳಿಯದ ಅಕ್ಷರ್ ಪಟೇಲ್; ಡು ಪ್ಲೆಸಿಸ್‌ಗೆ ನಾಯಕತ್ವ

ಪೊಲಾರ್ಡ್ ದಾಖಲೆ, ಆದರೂ ಸೋತ ಮುಂಬೈ

224 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡಕ್ಕೆ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಪೂರನ್ ನಾಯಕತ್ವದ MI ನ್ಯೂಯಾರ್ಕ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ ಕೇವಲ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ ಮುಂಬೈ ಪರ ಏಕಾಂಗಿ ಹೋರಾಟ ನಡೆಸಿದ ಮಾಜಿ ನಾಯಕ ಕೀರನ್ ಪೊಲಾರ್ಡ್, ಕೇವಲ 39 ಎಸೆತಗಳಲ್ಲಿ 70 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದರು. ಆದರೂ ಅವರಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಆದಾಗ್ಯೂ ತಮ್ಮ ಇನ್ನಿಂಗ್ಸ್​ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ ಪೊಲಾರ್ಡ್​, MI ನ್ಯೂಯಾರ್ಕ್ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಮುರಿದರು. MI ನ್ಯೂಯಾರ್ಕ್ ಪರ 18 ಸಿಕ್ಸರ್‌ಗಳನ್ನು ಬಾರಿಸಿರುವ ಪೊಲಾರ್ಡ್ ಈಗ MLC ಲೀಗ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆಯು 17 ಸಿಕ್ಸರ್‌ಗಳನ್ನು ಬಾರಿಸಿದ್ದ ಮೋನಾಂಕ್ ಪಟೇಲ್ ಹೆಸರಿನಲ್ಲಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ