ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್

2009ರ ಟಿ20 ವಿಶ್ವಕಪ್ ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ಪ್ರಮುಖ ಸದಸ್ಯರಾಗಿದ್ದ ಮೊಹಮ್ಮದ್ ಅಮೀರ್ ಅವರ ಕ್ರಿಕೆಟ್ ಬದುಕು ಏರಿಳಿತಗಳಿಂದ ಕೂಡಿತ್ತು. ಸ್ಪಾಟ್ ಫಿಕ್ಸಿಂಗ್ ನಿಷೇಧ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಮತ್ತು ಪುನರಾಗಮನಗಳ ನಂತರ ಅವರು ಇದೀಗ ಪಾಕ್ ತಂಡದಿಂದ ದೂರ ಸರಿದಿದ್ದಾರೆ. ಅಲ್ಲದೆ 34ನೇ ವಯಸ್ಸಿನಲ್ಲಿ ಬ್ರಿಟಿಷ್ ಪ್ರಜೆಯಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್
Mohammad Amir
Image Credit source: ICC

Updated on: Jul 13, 2026 | 12:29 PM

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಕೂಡ ಬ್ರಿಟಿಷ್ ಪ್ರಜೆಯಾಗಿ ಎಂಬುದು ವಿಶೇಷ. ಮೊಹಮ್ಮದ್ ಅಮೀರ್ ಅವರು ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದು, ಇದೀಗ ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಳೀಯ ಆಟಗಾರನಾಗಿ ಹೊಸ ಪಯಣ ಆರಂಭಿಸಿದ್ದಾರೆ.

 ಪೌರತ್ವ ಸಿಕ್ಕಿದ್ದು ಹೇಗೆ?

ಮೊಹಮ್ಮದ್ ಅಮೀರ್ ಅವರ ಪತ್ನಿ ನರ್ಜಿಸ್ ಖಾನ್ ಅವರು ಬ್ರಿಟಿಷ್ ಪ್ರಜೆಯಾಗಿದ್ದಾರೆ. ಇದರ ಆಧಾರದ ಮೇಲೆ ಅಮೀರ್ ಕೆಲವು ವರ್ಷಗಳ ಹಿಂದೆಯೇ ಯುಕೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ದೀರ್ಘಾವಧಿಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬ್ರಿಟಿಷ್ ಸರ್ಕಾರ ಅವರಿಗೆ ನಾಗರಿಕತ್ವವನ್ನು ನೀಡಿದೆ.

‘ಸ್ಥಳೀಯ ಆಟಗಾರ’!

ಬ್ರಿಟಿಷ್ ಪೌರತ್ವ ಸಿಕ್ಕ ತಕ್ಷಣವೇ ಮೊಹಮ್ಮದ್ ಅಮೀರ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸ್ಥಳೀಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಕೌಂಟಿ ಕ್ರಿಕೆಟ್​ನಲ್ಲಿ ಒಪ್ಪಂದವನ್ನೂ ಕೂಡ ಮಾಡಿಕೊಂಡಿದ್ದಾರೆ.

  • ಇಂಗ್ಲೆಂಡ್‌ನ ಪ್ರಸಿದ್ಧ ಕೌಂಟಿ ತಂಡವಾದ ನಾಟಿಂಗ್‌ಹ್ಯಾಮ್‌ಶೈರ್ ಪರ ದೇಶೀಯ ಆಟಗಾರನಾಗಿ ಅಮೀರ್ ಒಪ್ಪಂದ ಮಾಡಿಕೊಂಡಿದ್ದಾರೆ.
  • ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿರುವುದರಿಂದ ಅವರು ತಂಡದ ಇಬ್ಬರು ವಿದೇಶಿ ಆಟಗಾರರ ಕೋಟಾದಡಿ ಬರುವುದಿಲ್ಲ. ಹೀಗಾಗಿ ತಂಡದ ಆಯ್ಕೆ ಪ್ರಕ್ರಿಯೆ ಸುಲಭವಾಗಿದೆ.
  • ದಿ ಹಂಡ್ರೆಡ್: ಇಂಗ್ಲೆಂಡ್‌ನ 100 ಎಸೆತಗಳ ಟೂರ್ನಿಯಲ್ಲಿ ಅಮೀರ್ ಆರಂಭದಲ್ಲಿ ವಿದೇಶಿ ಆಟಗಾರನಾಗಿ ಡ್ರಾಫ್ಟ್‌ನಲ್ಲಿ ಹೆಸರು ನೋಂದಾಯಿಸಿ ಅನ್‌ಸೋಲ್ಡ್ ಆಗಿದ್ದರು. ಆದರೆ ಪೌರತ್ವ ಸಿಕ್ಕ ಬೆನ್ನಲ್ಲೇ, ಗಾಯಗೊಂಡ ಇಂಗ್ಲೆಂಡ್ ವೇಗಿ ಡೇವಿಡ್ ಪೇನ್ ಅವರ ಬದಲಿಗೆ ‘ಟ್ರೆಂಟ್ ರಾಕೆಟ್ಸ್’ ತಂಡಕ್ಕೆ ಸ್ಥಳೀಯ ಆಟಗಾರನಾಗಿ ನೇರ ಪ್ರವೇಶ ಪಡೆದಿದ್ದಾರೆ.

ಐಪಿಎಲ್ ಕನಸು ನನಸಾಗಲಿದೆಯೇ?

2008ರ ಮುಂಬೈ ದಾಳಿಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಿದೆ. ಆದರೆ, ಅಮೀರ್ ಈಗ ಬ್ರಿಟಿಷ್ ಪ್ರಜೆಯಾಗಿರುವುದರಿಂದ ಅವರು ಇಂಗ್ಲೆಂಡ್ ಮೂಲದ ವಿದೇಶಿ ಆಟಗಾರನಾಗಿ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕಾನೂನುಬದ್ಧವಾಗಿ ಅರ್ಹರಾಗಿದ್ದಾರೆ.

ಇದನ್ನೂ ಓದಿ: ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ!

ಅಮೀರ್ ಕೂಡ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. “ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡುತ್ತೇನೆ” ಎಂದು ಅಮೀರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ಐಪಿಎಲ್ 2027ರ ಹರಾಜಿನಲ್ಲಿ ಮೊಹಮ್ಮದ್ ಅಮೀರ್ ಹೆಸರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

 

Published On - 12:28 pm, Mon, 13 July 26

Follow Us