ಕೊಹ್ಲಿಯನ್ನು ಸ್ವಾರ್ಥಿ ಎಂದಿದ್ದವನಿಗೆ ಪಾಕ್ ತಂಡದ ಮುಖ್ಯ ಕೋಚ್ ಹುದ್ದೆ..!
Mohammed Hafeez: ಸದ್ಯ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅದರಂತೆ ಪ್ರೊಫೆಸರ್ ಎಂದೇ ಖ್ಯಾತರಾಗಿರುವ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರನ್ನು ಪಿಸಿಬಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
ಸದ್ಯ ಪಾಕಿಸ್ತಾನ ಕ್ರಿಕೆಟ್‌ನಲ್ಲಿ (Pakistan Cricket) ಬದಲಾವಣೆಯ ಗಾಳಿ ಬೀಸುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ತಂಡದ ಕಳಪೆ ಪ್ರದರ್ಶನದ ನಂತರ, ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಂಪೂರ್ಣ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಇದರ ನಂತರ ಬಾಬರ್ ಆಝಂ (Babar Azam) ಅವರನ್ನು ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿಸಲಾಯಿತು. ಆ ಬಳಿಕ ಟಿ20 ಮತ್ತು ಟೆಸ್ಟ್ ತಂಡಕ್ಕೆ ಹೊಸ ನಾಯಕರನ್ನು ಘೋಷಿಸುವ ಸಂದರ್ಭದಲ್ಲಿ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನು ಎನ್‌ಸಿಎಗೆ ವರ್ಗಾಯಿಸಿದ್ದ ಪಿಸಿಬಿ, ಈಗ ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರೊಫೆಸರ್ ಎಂದೇ ಖ್ಯಾತರಾಗಿರುವ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ () ಅವರನ್ನು ಪಿಸಿಬಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
ಹಫೀಜ್‌ಗಿಂತ ಮೊದಲು, ಗ್ರಾಂಟ್ ಬ್ರಾಡ್‌ಬರ್ನ್ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ, ತಂಡವು ಏಷ್ಯಾಕಪ್ ಮತ್ತು ನಂತರ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇದರ ನಂತರ, ಪಿಸಿಬಿ ಅವರನ್ನು ಸಂಪೂರ್ಣ ಸಿಬ್ಬಂದಿಯೊಂದಿಗೆ ಎನ್‌ಸಿಎಗೆ ವರ್ಗಾಯಿಸಿದ್ದು, ಈಗ ಹಫೀಜ್ ಅವರನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಪಾಕಿಸ್ತಾನ ತಂಡದ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದೆ.
‘ಮತ್ತೊಂದು ಸ್ವಾರ್ಥಿ 100’: ವಿರಾಟ್ ಕೊಹ್ಲಿ 50ನೇ ಶತಕ, ಮೊಹಮ್ಮದ್ ಹಫೀಜ್ ಕಾಲೆಳೆದ ಮೈಕಲ್ ವಾನ್
ದುಪ್ಪಟ್ಟು ಜವಾಬ್ದಾರಿ
ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರು ಹಫೀಜ್ ಮೇಲೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದು, ಅವರಿಗೆ ಎರಡು ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದ ಸಂದರ್ಭದಲ್ಲಿ ಅವರು ತಂಡದ ಕೋಚ್ ಆಗಿದ್ದಲ್ಲದೆ, ಹಫೀಜ್ ಅವರನ್ನು ತಂಡದ ನಿರ್ದೇಶಕರಾಗಿಯೂ ಪಿಸಿಬಿ ನೇಮಕ ಮಾಡಿದೆ. ಹಫೀಜ್ಗೂ ಮೊದಲು ಈ ಜವಾಬ್ದಾರಿ ಮಿಕ್ಕಿ ಆರ್ಥರ್ ಮೇಲಿತ್ತು. ಆರ್ಥರ್ ಈಗ NCA ಯಲ್ಲಿ ಉಳಿದ ಕೋಚಿಂಗ್ ಸಿಬ್ಬಂದಿಯೊಂದಿಗೆ ಇರಲಿದ್ದಾರೆ. ಪಾಕಿಸ್ತಾನ, ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ತಂಡ ಈ ಪ್ರವಾಸ ಮಾಡಲಿದೆ. ಆದರೆ, ಹಫೀಜ್‌ಗೆ ಕೋಚಿಂಗ್ ಅನುಭವವಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕರನ್ನಾಗಿ ಪಿಸಿಬಿ ಮಾಡಿದ್ದು, ಟಿ20 ತಂಡದ ನಾಯಕತ್ವವನ್ನು ಶಾಹೀನ್ ಶಾ ಆಫ್ರಿದಿಗೆ ವಹಿಸಲಾಗಿದೆ. ಆದರೆ ಏಕದಿನ ತಂಡದ ನಾಯಕನನ್ನು ಪಿಸಿಬಿ ಇನ್ನು ಪ್ರಕಟಿಸಿಲ್ಲ.
ವಿರಾಟ್ರನ್ನು ಸ್ವಾರ್ಥಿ ಎಂದಿದ್ದ ಹಫೀಜ್
ವಾಸ್ತವವಾಗಿ ಪಾಕ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಹಫೀಜ್, ಕೆಲವೇ ದಿನಗಳ ಹಿಂದೆ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆದಿದ್ದರು. ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳನ್ನು ಸರಿಗಟ್ಟಿದಾಗ, ಹಫೀಜ್ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆದಿದ್ದರು. ಕೊಹ್ಲಿ ಅವರು ತಮ್ಮ ಶತಕವನ್ನು ಪೂರ್ಣಗೊಳಿಸುವ ಸಲುವಾಗಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ಆರೋಫಿಸಿದ್ದರು. ಆ ಬಳಿಕ ಈ ವಿಚಾರ ಎಲ್ಲೆಡೆ ಭಾರಿ ವೈರಲ್ ಆಗಿತ್ತು.
ಇನ್ನು ಹಫೀಜ್ ಆಲ್ ರೌಂಡರ್ ಆಗಿದ್ದು ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಪರ ಕೊನೆಯ ಪಂದ್ಯವನ್ನಾಡಿದ್ದರು. ಉತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಹಫೀಜ್ ಆಫ್-ಸ್ಪಿನರ್ ಕೂಡ ಆಗಿದ್ದರು. ಆದರೆ ಅವರ ಬೌಲಿಂಗ್ ಶೈಲಿ ಸಾಕಷ್ಟು ಅನುಮಾನಾಸ್ಪದವಾಗಿದ್ದರಿಂದ ಐಸಿಸಿ ಅವರ ಬೌಲಿಂಗ್ ಅನ್ನು ನಿಷೇಧಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Fri, 17 November 23