ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್: ಮೊಹ್ಸಿನ್ ನಖ್ವಿ ಎಕ್ಸ್ ಖಾತೆ ಬ್ಯಾನ್
Asia Cup 2025 Final India vs Pakistan: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಎಸಿಸಿ ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಭಾರೀ ಮುಖಭಂಗ ಅನುಭವಿಸಿದ್ದಾರೆ.

ಏಷ್ಯಾಕಪ್ ಮುಕ್ತಾಯಗೊಂಡರೂ ವಿವಾದ ಮಾತ್ರ ನಿಂತಿಲ್ಲ. ಹ್ಯಾಂಡ್ ಶೇಕ್ ವಿವಾದದೊಂದಿಗೆ ಶುರುವಾದ ಏಷ್ಯಾಕಪ್ ಟ್ರೋಫಿ ಹಸ್ತಾಂತರದ ವಿವಾದದೊಂದಿಗೆ ಕೊನೆಗೊಂಡಿದೆ. ಈ ವಿವಾದಗಳ ಬೆನ್ನಲ್ಲೇ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ಗೆ ಖಾರವಾಗಿ ಪ್ರತಿಕ್ರಿಯಿಸಿರುವುದು.
ಏಷ್ಯಾಕಪ್ ಗೆದ್ದ ಬೆನ್ನಲೇ ಪ್ರಧಾನಿ ಮೋದಿ, “ಮೈದಾನದಲ್ಲೂ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ – ಭಾರತ ಗೆದ್ದಿದೆ! ಎಂದು ಎಕ್ಸ್ ಖಾತೆಯಲ್ಲಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮೊಹ್ಸಿನ್ ನಖ್ವಿ, “ಯುದ್ಧವು ನಿಮಗೆ ಹೆಮ್ಮೆಯಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನೀವು ಅವಮಾನಕರ ಸೋಲುಗಳನ್ನು ಇತಿಹಾಸವನ್ನು ಹೊಂದಿದ್ದೀರಿ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ ಮತ್ತು ಆಟದ ಉತ್ಸಾಹವನ್ನೇ ಅವಮಾನಿಸುತ್ತದೆ” ಎಂದು ನಖ್ವಿ ಟ್ವೀಟ್ ಮಾಡಿದ್ದರು.
ಭಾರತದ ವಿರುದ್ಧದ ಈ ವಿವಾದಾತ್ಮಕ ಟ್ವೀಟ್ ಬೆನ್ನಲ್ಲೇ ಇದೀಗ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಯಿಡಲಾಗಿದೆ. ಇದಕ್ಕೂ ಮುನ್ನ ನಖ್ವಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ಲೇನ್ ಸೆಲೆಬ್ರೇಷನ್ ಫೋಟೋ ಹಂಚಿಕೊಳ್ಳುವ ಮೂಲಕ ಭಾರತೀಯ ಜೆಟ್ ಉರುಳಿಸಿದ್ದೇವೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು.
ಅಲ್ಲದೆ ಪಾಕಿಸ್ತಾನ್ ಆಟಗಾರ ಹಾರಿಸ್ ರೌಫ್ ಭಾರತದ ವಿರುದ್ಧ ಮೈದಾನದಲ್ಲಿ ತೋರಿಸಿದ ಫೈಟರ್ ಜೆಟ್ ಸೆಲೆಬ್ರೇಷನ್ ಅನ್ನು ಸಮರ್ಥಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ಆಟಗಾರರು ನಿರಾಕರಿಸಿದ್ದರು.
ಭಾರತ ತಂಡವು ಟ್ರೋಫಿ ಸ್ವೀಕರಿಸಲು ಹಿಂದೇಟು ಹಾಕಿದ್ದ ಕಾರಣ, ಏಷ್ಯಾಕಪ್ ಅನ್ನು ಹೊಟೇಲ್ಗೆ ಕೊಂಡೊಯ್ಯುವಂತೆ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಸೂಚಿಸಿದ್ದರು. ಹೀಗಾಗಿ ಭಾರತ ತಂಡವು ಟ್ರೋಫಿ ಇಲ್ಲದೇ ಏಷ್ಯಾಕಪ್ ಟೂರ್ನಿಯಲ್ಲಿ ಸಂಭ್ರಮಿಸಿದ್ದರು.
ಇದನ್ನೂ ಓದಿ: Asia Cup 2025: ಏಷ್ಯಾಕಪ್ನಲ್ಲಿ ಕಾರ್ ಸಿಕ್ಕಿದ್ದು ಯಾರಿಗೆ?
ಈ ವಿವಾದದೊಂದಿಗೆ ಭಾರೀ ಮುಖಭಂಗ ಅನುಭವಿಸಿರುವ ಮೊಹ್ಸಿನ್ ನಖ್ವಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ವೈಯುಕ್ತಿಕ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
