ನೆದರ್ಲೆಂಡ್ಸ್ನ ಸ್ಪೋರ್ಟ್‌ಪಾರ್ಕ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಲೀಗ್-2 ಪಂದ್ಯದಲ್ಲಿ ಅಮೆರಿಕ (ಯುಎಸ್ಎ) ತಂಡದ ನಾಯಕ ಮೊನಾಂಕ್ ಪಟೇಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಮೆರಿಕ ತಂಡಕ್ಕೆ ಸ್ಟೀವನ್ ಟೇಲರ್ (27) ಹಾಗೂ ಸ್ಮಿತ್ ಪಟೇಲ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 75 ರನ್ಗಳ ಜೊತೆಯಾಟವಾಡಿದ ಬಳಿಕ ಸ್ಮಿತ್ ಪಟೇಲ್ (63) ಔಟಾದರು. ಈ ವೇಳೆ ಕಣಕ್ಕಿಳಿದ ನಾಯಕ ಮೊನಾಂಕ್ ಪಟೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಮೊನಾಂಕ್ ಆ ಬಳಿಕ ಸ್ಪೋಟಕ ಇನಿಂಗ್ಸ್ ಆಡಿದರು.
ಪರಿಣಾಮ 95 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 121 ರನ್ ಚಚ್ಚಿದ್ದರು. ಮತ್ತೊಂದೆಡೆ ಮೊನಾಂಕ್ ಪಟೇಲ್ಗೆ ಉತ್ತಮ ಸಾಥ್ ನೀಡಿದ ಶಯಾನ್ ಜಹಾಂಗೀರ್ 47 ಎಸೆತಗಳಲ್ಲಿ 57 ರನ್ ಸಿಡಿಸಿದರು. ಈ ಮೂಲಕ ಅಮೆರಿಕ ತಂಡವು 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕಿತು.
305 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕೆನಡಾ ತಂಡಕ್ಕೆ ಆರೋನ್ ಜಾನ್ಸನ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜಾನ್ಸನ್ 41 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 55 ರನ್ ಸಿಡಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪರ್ಗತ್ ಸಿಂಗ್ 42 ರನ್ಗಳ ಕೊಡುಗೆ ನೀಡಿದರೆ, ಹರ್ಷ್ ಠಾಕರ್ 77 ರನ್ ಸಿಡಿಸಿದರು. ಹಾಗೆಯೇ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ದಿಲ್ಲನ್ ಹೇಲಿಗರ್ 56 ರನ್ ಬಾರಿಸುವ ಮೂಲಕ ಕೆನಡಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.
ಆದರೆ ಅಂತಿಮ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಅಮೆರಿಕ ಬೌಲರ್ಗಳು ಕೆನಡಾ ತಂಡವನ್ನು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 290 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಅಮೆರಿಕ ತಂಡವು 14 ರನ್ಗಳ ರೋಚಕ ಜಯ ಸಾಧಿಸಿದೆ.
ಕೆನಡಾ ಪ್ಲೇಯಿಂಗ್ 11: ಆರೋನ್ ಜಾನ್ಸನ್ , ದಿಲ್ಪ್ರೀತ್ ಬಾಜ್ವಾ , ಆದಿತ್ಯ ವರದರಾಜನ್ , ನಿಕೋಲಸ್ ಕಿರ್ಟನ್ (ನಾಯಕ) , ಪರ್ಗತ್ ಸಿಂಗ್ , ಹರ್ಷ್ ಠಾಕರ್ , ಶ್ರೇಯಸ್ ಮೊವ್ವಾ (ವಿಕೆಟ್ ಕೀಪರ್) , ಸಾದ್ ಬಿನ್ ಜಾಫರ್ , ದಿಲ್ಲನ್ ಹೇಲಿಗರ್ , ಕಲೀಮ್ ಸನಾ , ಜೆರೆಮಿ ಗಾರ್ಡನ್.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!
ಅಮೆರಿಕ ಪ್ಲೇಯಿಂಗ್ 11: ಸ್ಟೀವನ್ ಟೇಲರ್ , ಸ್ಮಿತ್ ಪಟೇಲ್ , ಮೊನಾಂಕ್ ಪಟೇಲ್ (ನಾಯಕ) , ಆರೋನ್ ಜೋನ್ಸ್ , ಮಿಲಿಂದ್ ಕುಮಾರ್ , ಶಯಾನ್ ಜಹಾಂಗೀರ್ , ಹರ್ಮೀತ್ ಸಿಂಗ್ , ಶಾಡ್ಲಿ ವ್ಯಾನ್ ಶಾಲ್ಕ್ವಿಕ್ , ಜಸ್ದೀಪ್ ಸಿಂಗ್ , ಅಭಿಷೇಕ್ ಪರಾಡ್ಕರ್ , ನೋಸ್ತೂಶ್ ಕೆಂಜಿಗೆ.