R Ashwin: ಗಮ್ಯಸ್ಥಾನಕ್ಕಿಂತ, ನನ್ನ ಈ ಪ್ರಯಾಣವೇ ವಿಶೇಷ: ಆರ್ ಅಶ್ವಿನ್

| Updated By: ಝಾಹಿರ್ ಯೂಸುಫ್

Updated on: Mar 05, 2024 | 3:12 PM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಮಾರ್ಚ್ 7 ರಿಂದ ಶುರುವಾಗಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶೇಷ ದಾಖಲೆ ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 14ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

R Ashwin: ಗಮ್ಯಸ್ಥಾನಕ್ಕಿಂತ, ನನ್ನ ಈ ಪ್ರಯಾಣವೇ ವಿಶೇಷ: ಆರ್ ಅಶ್ವಿನ್
Ravichandran Ashwin
Follow us on

ಗುರುವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್‌ಗಾಗಿ ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಈ ಪಂದ್ಯವು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಪಾಲಿಗೆ ವಿಶೇಷ ಪಂದ್ಯ. ಏಕೆಂದರೆ ಈ ಪಂದ್ಯದ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆಯಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 14ನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ಧರ್ಮಶಾಲಾ ಟೆಸ್ಟ್ ಪಂದ್ಯವು ಅಶ್ವಿನ್ ಪಾಲಿಗೆ ತುಂಬಾ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ.

ಇನ್ನು ನೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್, ಇದು ಗಮನಾರ್ಹ ಸಾಧನೆ ಎಂಬುದು ಗೊತ್ತಿದೆ. ಆದರೆ ನನಗೆ ಗಮ್ಯಸ್ಥಾನಕ್ಕಿಂತ ಇಲ್ಲಿಯವರೆಗಿನ ಪ್ರಯಾಣವೇ ತುಂಬಾ ವಿಶೇಷ ಎನಿಸುತ್ತಿದೆ.

100ನೇ ಟೆಸ್ಟ್ ಪಂದ್ಯ ನನಗೆ ಬಹಳ ಮುಖ್ಯ. ನನಗೆಷ್ಟು ಮುಖ್ಯವೋ ಅದಕ್ಕಿಂತಲೂ ಇದು ನನ್ನ ತಂದೆ, ತಾಯಿ, ಹೆಂಡತಿ ಮತ್ತು ನನ್ನ ಮಕ್ಕಳಿಗೂ ಹೆಚ್ಚು ಮುಖ್ಯವಾಗಿದೆ. ನನ್ನ ಮಕ್ಕಳು ಟೆಸ್ಟ್​ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ಆಟಗಾರನ ಪ್ರಯಾಣದ ಸಮಯದಲ್ಲಿ ಕುಟುಂಬಗಳು ಬಹಳಷ್ಟು ಹಾದಿಯನ್ನು ಸವೆದಿರುತ್ತಾರೆ. ನನ್ನ ತಂದೆ ಈಗಲೂ ನಾನು ಪಂದ್ಯದ ವೇಳೆ ಏನು ಮಾಡಿದನೆಂದು 40 ಕರೆಗಳಿಗೆ ಉತ್ತರಿಸುತ್ತಾರೆ ಎಂದು ಅಶ್ವಿನ್ ಹೇಳಿದರು.

ಇದೇ ವೇಳೆ ಧರ್ಮಶಾಲಾದಲ್ಲಿ ಆಡುವ ಬಗ್ಗೆ ಕೇಳಿದಾಗ, 21 ವರ್ಷಗಳ ಹಿಂದೆ ನಾನು ಇಲ್ಲಿ ಎರಡು ತಿಂಗಳ ಕಾಲ ಅಂಡರ್​ 19 ಕ್ರಿಕೆಟ್ ಆಡಿದ್ದೆ. ಇದು ತುಂಬಾ ಚಳಿಯಿದೆ. ಬೆರಳುಗಳು ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಇಲ್ಲಿ ಸೌಂದರ್ಯವನ್ನು ವರ್ಣಿಸಲಾಗುವುದಿಲ್ಲ ಎಂದು ಅಶ್ವಿನ್ ಉತ್ತರಿಸಿದರು.

ಅಂದಹಾಗೆ ರಾಜ್​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂಲಕ ರವಿಚಂದ್ರನ್ ಅಶ್ವಿನ್ 500 ವಿಕೆಟ್​ಗಳ ಸಾಧನೆ ಮಾಡಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದರು. ಇದೀಗ 500+ ವಿಕೆಟ್​ಗಳೊಂದಿಗೆ 100 ಪಂದ್ಯಗಳನ್ನಾಡುವ ಮೂಲಕ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ಸರಣಿ ಟೀಮ್ ಇಂಡಿಯಾ ವಶ:

ಭಾರತ-ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ 4 ಪಂದ್ಯಗಳು ಮುಗಿದಿದೆ. ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮೂರು ಜಯ ಸಾಧಿಸಿದರೆ, ಇಂಗ್ಲೆಂಡ್ ಒಂದು ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.