Shahbaz Nadeem: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಶಹಬಾಝ್ ನದೀಮ್
Shahbaz Nadeem: 2019 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಶಹಬಾಝ್ ನದೀಮ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಅಲ್ಲದೆ ಫಸ್ಟ್ ಕ್ರಿಕೆಟ್ನಲ್ಲಿ 542 ವಿಕೆಟ್ ಪಡೆದಿದ್ದರು. ಆದರೆ ಭಾರತದ ಪರ ಹೆಚ್ಚಿನ ಪಂದ್ಯಗಳನ್ನಾಡುವ ಅವಕಾಶ ಜಾರ್ಖಂಡ್ನ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ಗೆ ಸಿಕ್ಕಿರಲಿಲ್ಲ.
ಟೀಮ್ ಇಂಡಿಯಾ ಆಟಗಾರ ಶಹಬಾಝ್ ನದೀಮ್ (Shahbaz Nadeem) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವಕಾಶ ನಿರೀಕ್ಷಿಸದ ಕಾರಣ ಅವರು ನಿವೃತ್ತಿ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಇನ್ಮುಂದೆ ದೇಶೀಯ ಕ್ರಿಕೆಟ್ನಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಜಾರ್ಖಂಡ್ ಮೂಲದ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಟೀಮ್ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2019 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಶಹಬಾಝ್ ಆ ಬಳಿಕ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ಈ ವೇಳೆ ಒಟ್ಟು 8 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು.
ಇದೀಗ ತಮ್ಮ 34ನೇ ವಯಸ್ಸಿಗೆ ನಿವೃತ್ತಿಯನ್ನು ಘೋಷಿಸಿರುವ ಶಹಬಾಝ್ ನದೀಮ್ ಮುಂಬರುವ ದಿನಗಳಲ್ಲಿ ಫ್ರಾಂಚೈಸ್ ಆಧಾರಿತ ಲೀಗ್‌ಗಳಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
“ನಾನು ಇನ್ನು ಮುಂದೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಆಯ್ಕೆಗಾರರ ಯೋಜನೆಗಳಲ್ಲಿಲ್ಲ. ಪ್ರತಿಭಾವಂತ ಯುವಕರ ಗುಂಪೇ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದೆ. ಹೀಗಾಗಿ ಇನ್ಮುಂದೆ ನಾನು ಆಯ್ಕೆಯಾಗುವುದು ಅನುಮಾನ. ಹಾಗಾಗಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ನದೀಮ್ ತಿಳಿಸಿದ್ದಾರೆ.
“ಟೀಮ್ ಇಂಡಿಯಾದಲ್ಲಿ ನನಗೆ ಅವಕಾಶಗಳು ಇದ್ದಲ್ಲಿ ನಾನು ಆಟವನ್ನು ಮುಂದುವರಿಸುತ್ತಿದ್ದೆ … ಆದರೆ, ಮುಂದಿನ ದಿನಗಳಲ್ಲಿ ಯಾವುದೇ ಅವಕಾಶಗಳನ್ನು ನಾನು ನಿರೀಕ್ಷಿಸುವುದಿಲ್ಲ. ಹೀಗಾಗಿ ವಿದಾಯ ಹೇಳಲು ಇದು ಸಕಾಲ. ಅಲ್ಲದೆ ಮುಂಬರುವ ದಿನಗಳಲ್ಲಿ ಮತ್ತು ವಿವಿಧ ಲೀಗ್‌ಗಳಲ್ಲಿ ನನ್ನ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದ್ದೇನೆ ಎಂದು ಶಹಬಾಝ್ ನದೀಮ್ ತಿಳಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 140 ಪಂದ್ಯಗಳನ್ನಾಡಿರುವ ಶಹಬಾಝ್ ನದೀಮ್ ಒಟ್ಟು 542 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ಲೀಸ್ಟ್ ಎ ಕ್ರಿಕೆಟ್ನಲ್ಲಿ 134 ಪಂದ್ಯಗಳಿಂದ 175 ವಿಕೆಟ್ ಪಡೆದಿದ್ದಾರೆ. ಇನ್ನು 150 ಟಿ20 ಪಂದ್ಯಗಳನ್ನಾಡಿರುವ ಅವರು 125 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ಕಾಣಿಸಿಕೊಂಡಿರುವ ಶಹಬಾಝ್ ಒಟ್ಟು 72 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 48 ವಿಕೆಟ್ ಕಬಳಿಸಲಷ್ಟೇ ಯಶಸ್ವಿಯಾಗಿದ್ದಾರೆ. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಹೇಳಿರುವ ಶಹಬಾಝ್ ನದೀಮ್ ಮುಂಬರುವ ಲೆಜೆಂಡ್ಸ್ ಲೀಗ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.