ಧೋನಿ ಸೇರಿದಂತೆ 7 ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

MS Dhoni: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಪರ ಒಟ್ಟು 538 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 17266 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಭಾರತ ತಂಡಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

ಧೋನಿ ಸೇರಿದಂತೆ 7 ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
Ms Dhoni

Updated on: Jun 10, 2025 | 9:16 AM

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ವಿಶ್ವದ 7 ಆಟಗಾರರಿಗೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಲ್ ಆಫ್ ಫೇಮ್ ಗೌರವ ನೀಡಿದೆ. ಧೋನಿ ಅವರ ನಾಯಕತ್ವದ ಗುಣಗಳು ಹಾಗೂ ಕ್ರಿಕೆಟ್​ಗೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರನ್ನು ಹಾಲ್ ಆಫ್ ಫೇಮ್​ ಪಟ್ಟಿಗೆ ಸೇರಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದರೊಂದಿಗೆ ಐಸಿಸಿ ಹಾಲ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ 11ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಟೀಮ್ ಇಂಡಿಯಾ ಕ್ರಿಕೆಟಿಗರ ಪಟ್ಟಿ ಈ ಕೆಳಗಿನಂತಿದೆ…

ಸಂಖ್ಯೆ ಹೆಸರು ವರ್ಷ
1 ಬಿಷನ್ ಬೇಡಿ 2009
2 ಕಪಿಲ್ ದೇವ್ 2009
3 ಸುನಿಲ್ ಗವಾಸ್ಕರ್ 2009
4 ಅನಿಲ್ ಕುಂಬ್ಳೆ 2015
5 ರಾಹುಲ್ ದ್ರಾವಿಡ್ 2018
6 ಸಚಿನ್ ತೆಂಡೂಲ್ಕರ್ 2019
7 ವಿನೂ ಮಂಕಡ್ 2021
8 ಡಯಾನಾ ಎಡುಲ್ಜಿ 2023
9 ವೀರೇಂದ್ರ ಸೆಹ್ವಾಗ್ 2023
10 ನೀತು ಡೇವಿಡ್ 2023
11 ಎಂಎಸ್ ಧೋನಿ 2025

2025 ರಲ್ಲಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಕ್ರಿಕೆಟಿಗರು:

  • ಮಹೇಂದ್ರ ಸಿಂಗ್ ಧೋನಿ (ಭಾರತ)
  • ಡೇನಿಯಲ್ ವೆಟ್ಟೋರಿ (ನ್ಯೂಝಿಲೆಂಡ್)
  • ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
  • ಗ್ರೇಮ್ ಸ್ಮಿತ್ (ಸೌತ್ ಆಫ್ರಿಕಾ)
  • ಸಾರಾ ಟೇಲರ್ (ಇಂಗ್ಲೆಂಡ್)
  • ಹಾಶಿಮ್ ಆಮ್ಲ (ಸೌತ್ ಆಫ್ರಿಕಾ)
  • ಸನಾ ಮಿರ್ (ಪಾಕಿಸ್ತಾನ್)

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಧೋನಿ ಸಾಧನೆ:

ಮಹೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅದರಲ್ಲೂ ಐಸಿಸಿ ಟೂರ್ನಿಯ ಮೂರು ಪ್ರಶಸ್ತಿಗಳನ್ನು ಪಡೆದ ಏಕೈಕ ಕ್ಯಾಪ್ಟನ್ ಧೋನಿ. 2007 ರಲ್ಲಿ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ 2011 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರವಹಿಸಿದ್ದರು.

ಅಲ್ಲದೆ ಟೀಮ್ ಇಂಡಿಯಾ ಪರ 538 ಪಂದ್ಯಗಳನ್ನಾಡಿರುವ ಧೋನಿ ಒಟ್ಟು 17266 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 26ನೇ ಸ್ಥಾನ ಅಲಂಕರಿಸಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಮಹೇಂದ್ರ ಸಿಂಗ್ ಧೋನಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.