ಕೆಎಲ್ ರಾಹುಲ್ ಐಪಿಎಲ್ ಇತಿಹಾಸದ ಅತ್ಯಂತ ನತದೃಷ್ಟ ಆಟಗಾರ..!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 5 ಸಾವಿರಕ್ಕೂ ಅಧಿಕ ರನ್ ಕಲೆಹಾಕಿ ಟ್ರೋಫಿ ಗೆಲ್ಲದ ಆಟಗಾರರೆಂದರೆ ಅದು ಕೆಎಲ್ ರಾಹುಲ್ (5222) ಹಾಗೂ ಎಬಿ ಡಿವಿಲಿಯರ್ಸ್ (5162). ಈ ಇಬ್ಬರು ಆಟಗಾರರು ಐಪಿಎಲ್ನಲ್ಲಿ ರನ್ ರಾಶಿ ಪೇರಿಸಿದರೂ ಒಮ್ಮೆಯೂ ಟ್ರೋಫಿಗೆ ಮುತ್ತಿಕ್ಕಲು ಸಾಧ್ಯವಾಗಲಿಲ್ಲ. ಅದರಲ್ಲೂ ಕೆಎಲ್ ರಾಹುಲ್ ಐಪಿಎಲ್ ಟ್ರೋಫಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಮುಂದುವರೆದಿದೆ.
Updated on:Jun 10, 2025 | 10:59 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ನತದೃಷ್ಟ ಆಟಗಾರ ಯಾರು? ಈ ಪ್ರಶ್ನೆಗೆ ಈ ಹಿಂದೆ ಕೇಳಿ ಬರುತ್ತಿದ್ದ ಹೆಸರು ವಿರಾಟ್ ಕೊಹ್ಲಿ. ಏಕೆಂದರೆ ಕಳೆದ 17 ವರ್ಷಗಳಲ್ಲಿ 8 ಸಾವಿರ ರನ್ ಕಲೆಹಾಕಿದರೂ ಕೊಹ್ಲಿ ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಚಾಂಪಿಯನ್ ಪಟ್ಟದೊಂದಿಗೆ ಕಿಂಗ್ ಕೊಹ್ಲಿ ತನ್ನ ಮೇಲಿದ್ದ ನತದೃಷ್ಟ ಹಣೆಪಟ್ಟಿಯನ್ನು ಕಳಚಿದ್ದಾರೆ. ಇದರ ಬೆನ್ನಲ್ಲೇ ಈ ಅನ್ಲಕ್ಕಿ ಹಣೆಪಟ್ಟಿ ಕೆಎಲ್ ರಾಹುಲ್ ಪಾಲಾಗಿದೆ.

ಹೌದು, ಐಪಿಎಲ್ ಇತಿಹಾಸದ ನತದೃಷ್ಟ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಈಗ ಮುಂಚೂಣಿಯಲ್ಲಿದ್ದಾರೆ. ಕಳೆದ 13 ಸೀಸನ್ಗಳಲ್ಲಿ 5 ತಂಡಗಳ ಪರ ಕಣಕ್ಕಿಳಿದಿರುವ ರಾಹುಲ್ ಒಟ್ಟು 5222 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಅವರು ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಅಂದರೆ ಐಪಿಎಲ್ನಲ್ಲಿ ಅತ್ಯಧಿಕ ರನ್ ಪೇರಿಸಿ ಟ್ರೋಫಿ ಗೆಲ್ಲದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಇದೀಗ ಅಗ್ರಸ್ಥಾನದಲ್ಲಿದ್ದಾರೆ.

ಕೆಎಲ್ ರಾಹುಲ್ ತಮ್ಮ ಐಪಿಎಲ್ ಕೆರಿಯರ್ ಆರಂಭಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. 2013 ರಲ್ಲಿ ಆರ್ಸಿಬಿ 5 ಪಂದ್ಯಗಳನ್ನಾಡಿದ್ದ ರಾಹುಲ್ ಕೇವಲ 20 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು.

ಐಪಿಎಲ್ 2014 ರಲ್ಲಿ ಕೆಎಲ್ ರಾಹುಲ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿತು. ಅದರಂತೆ 2014 ಮತ್ತು 2015 ರಲ್ಲಿ ಎಸ್ಆರ್ಹೆಚ್ ಪರ ಕಣಕ್ಕಿಳಿದ ರಾಹುಲ್ ಒಟ್ಟು 20 ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 308 ರನ್ ಕಲೆಹಾಕಿದ್ದರು.

2016 ರ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿಯು ಟ್ರಾನ್ಸ್ಫರ್ ಆಯ್ಕೆಯ ಮೂಲಕ ಕೆಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದರಂತೆ ಎರಡು ಸೀಸನ್ಗಳಲ್ಲಿ (2016-17) ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಒಟ್ಟು 28 ಪಂದ್ಯಗಳನ್ನಾಡಿದ್ದರು. ಈ ವೇಳೆ ಕಲೆಹಾಕಿದ್ದು 397 ರನ್ಗಳು.

2018 ರಲ್ಲಿ ಪಂಜಾಬ್ ಕಿಂಗ್ಸ್ ಪಾಲಾದ ಕೆಎಲ್ ರಾಹುಲ್ 4 ಸೀಸನ್ ಆಡಿದ್ದರು. ಈ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು. ಅದರಂತೆ 2018 ರಿಂದ 2021ರವರೆಗೆ ಪಂಜಾಬ್ ಪರ ರಾಹುಲ್ 55 ಪಂದ್ಯಗಳನ್ನಾಡಿದ್ದ ರಾಹುಲ್ 2548 ರನ್ ಕಲೆಹಾಕಿದ್ದರು.

2021 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಆಯ್ಕೆಯಾದ ಕೆಎಲ್ ರಾಹುಲ್ ಎಲ್ಎಸ್ಜಿ ಪರ ಒಟ್ಟು ಮೂರು ಸೀಸನ್ ಆಡಿದ್ದಾರೆ. ಈ ವೇಳೆ ಒಟ್ಟು 38 ಪಂದ್ಯಗಳಲ್ಲಿ 1410 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿರುವ ಕೆಎಲ್ ರಾಹುಲ್ 14 ಪಂದ್ಯಗಳಿಂದ ಕಲೆಹಾಕಿರುವುದು 539 ರನ್ಗಳು. ಈ ಮೂಲಕ ಐಪಿಎಲ್ನ 145 ಪಂದ್ಯಗಳಿಂದ ಒಟ್ಟು 5222 ರನ್ ಕಲೆಹಾಕಿದ್ದಾರೆ. ಅತ್ತ ಐದು ತಂಡಗಳ ಪರ ಕಣಕ್ಕಿಳಿದು 5200+ ರನ್ಗಳಿಸಿದರೂ ಕೆಎಲ್ ರಾಹುಲ್ ಪಾಲಿಗೆ ಐಪಿಎಲ್ ಟ್ರೋಫಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಹೀಗಾಗಿಯೇ ಕೆಎಲ್ ರಾಹುಲ್ ಅವರನ್ನು ಐಪಿಎಲ್ನ ನತದೃಷ್ಟ ಆಟಗಾರ ಎಂದು ಪರಿಗಣಿಸಲಾಗುತ್ತಿದೆ.
Published On - 10:55 am, Tue, 10 June 25









