MS Dhoni Angry: ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡ ಧೋನಿ: ಎಂಎಸ್ಡಿ ಕೋಪಕಂಡು ತಬ್ಬಿಬ್ಬಾದ ಸಿಎಸ್ಕೆ ಬೌಲರ್
RR vs CSK, IPL 2023: ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಕೋಪಗೊಂಡ ಅಪರೂಪದ ಘಟನೆ ನಡೆಯಿತು. ಇದರ ವಿಡಿಯೋ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಗುರುವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RR vs CSK) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಈ ಹೈವೋಲ್ಟೇಜ್ ಮ್ಯಾಚ್ನಲ್ಲಿ ಸಂಜು ಸ್ಯಾಮ್ಸನ್ ಪಡೆ 32 ರನ್ಗಳ ಜಯ ಸಾಧಿಸಿ ಟೇಬಲ್ ಟಾಪರ್ ಆಯಿತು. ಇತ್ತ ಸೋತ ಸಿಎಸ್ಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. 203 ರನ್ಗಳ ರನ್ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಧೋನಿ ಪಡೆ ವಿಫಲವಾಯಿತು. ಎದುರಾಳಿಯ ಸ್ಫೋಟಕ ಬ್ಯಾಟಿಂಗ್ಗೆ ಬ್ರೇಕ್ ಹಾಕಲು ಸಿಎಸ್ಕೆಗೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಚೆನ್ನೈ ನಾಯಕ ಎಂಎಸ್ ಧೋನಿ (MS Dhoni) ತಾಳ್ಮೆ ಕಳೆದುಕೊಂಡ ಘಟನೆ ಕೂಡ ನಡೆಯಿತು.
ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಆರ್ಆರ್- ಸಿಎಸ್ಕೆ ನಡುವಣ ಪಂದ್ಯದಲ್ಲಿ ಕೋಪಗೊಂಡ ಅಪರೂಪದ ಘಟನೆ ನಡೆಯಿತು. 16ನೇ ಓವರ್‌ನಲ್ಲಿ ಮಥೀಶ ಪತಿರಾನ ಅವರು ಶಿಮ್ರಾನ್ ಹೆಟ್ಮೇರ್ಗೆ ಸ್ಲೋವರ್ ಬೌನ್ಸರ್ ಎಸೆದರು. ಚೆಂಡು ಬ್ಯಾಟ್ಗೆ ಸರಿಯಾಗಿ ಟೈಮ್ ಆಗದ ಕಾರಣ ಹೆಟ್ಮೇರ್ ದೇಹಕ್ಕೆ ತಗುಲಿ ಸ್ಟಂಪ್ ಹಿಂದೆ ಹೋಯಿತು. ತಕ್ಷಣವೆ ಚೆಂಡನ್ನು ಎತ್ತಿಕೊಂಡ ಧೋನಿ ನೇರವಾಗಿ ಬೌಲರ್‌ನ ತುದಿಯಲ್ಲಿರುವ ಸ್ಟಂಪ್‌ಗೆ ಎಸೆದರು.
IPL 2023: RCB ಪ್ಲೇಯಿಂಗ್ 11 ಬದಲಿಸದಿರಲು ಇದುವೇ ಅಸಲಿ ಕಾರಣ..!
ಆದರೆ, ಪತಿರಾನ ವಿಕೆಟ್ಗೆ ಅಡ್ಡವಾಗಿ ನಿಂತಿದ್ದರಿಂದ ಚೆಂಡು ಸ್ಟಂಪ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಅಲ್ಲದೆ ವಿಕೆಟ್ಗೆ ಬೀಳಲಿದ್ದ ಚೆಂಡನ್ನು ಸಿಎಸ್ಕೆ ಬೌಲರ್ ಕೈಯಲ್ಲಿ ಹಿಡಿಯಲು ಯತ್ನಿಸಿದರು. ಇದರಿಂದ ಕೋಪಗೊಂಡ ಧೋನಿ ಶ್ರೀಲಂಕಾದ ಯುವ ವೇಗಿಯ ಮೇಲೆ ಹರಿಹಾಯ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು 19ನೇ ಓವರ್‌ನಲ್ಲಿ ಕೂಡ ಧೋನಿ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡರು.
NEVER SEEN #Dhoni THIS ANGRY #CSKvRR #MSDhoni #csk #IPL2023 #ChennaiSuperKings #BCCI pic.twitter.com/Xn5y2ybovn
— Sakshi Dewangann (@SakshiDewangann) April 27, 2023
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸ್ಫೋಟಕ ಆರಂಭ ಪಡೆದುಕೊಂಡಿತು. ಜೋಸ್ ಬಟ್ಲರ್ ಜೊತೆಗೂಡಿ ಯಶಸ್ವಿ ಜೈಸ್ವಾಲ್ ಮನಬಂದಂತೆ ಬ್ಯಾಟ್ ಬೀಸಿದರು. ಬಟ್ಲರ್ 21 ಎಸೆತಗಳಲ್ಲಿ 27 ರನ್ ಗಳಿಸಿದರೆ, ಜೈಸ್ವಾಲ್ ಕೇವಲ 43 ಎಸೆತಗಳಲ್ಲಿ 8 ಫೋರ್, 4 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರು. ಧ್ರುವ್ ಜೂರೆಲ್ 15 ಎಸೆತಗಳಲ್ಲಿ 34 ಹಾಗೂ ದೇವದತ್ ಪಡಿಕ್ಕಲ್ ಅಜೇಯ 27 ರನ್ ಕಲೆಹಾಕಿದರು. ಆರ್ಆರ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಸಿಎಸ್ಕೆ ಪರ ತುಷಾರ್ ದೇಶ್ಪಾಂಡೆ 2 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ ಈ ಬಾರಿ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಫಾರ್ಮ್ನಲ್ಲಿದ್ದ ಡೆವೋನ್ ಕಾನ್ವೆ (8) ಹಾಗೂ ಅಜಿಂಕ್ಯಾ ರಹಾನೆ (15) ಬೇಗನೆ ಔಟಾದರು. ಆದರೆ, ರುತುರಾಜ್ ಗಾಯಕ್ವಾಡ್ (47) ಹಾಗೂ ಶಿವಂ ದುಬೆ (52) ಗೆಲುವಿಗೆ ಹೋರಾಡಿದರು. ಆದರೆ, ಇದಕ್ಕೆ ಯಶಸ್ಸು ಸಿಗಲಿಲ್ಲ. ಅಂಬಟಿ ರಾಯುಡು ಸೊನ್ನೆ ಸುತ್ತಿದರೆ, ಮೊಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ತಲಾ 23 ಗಳಿಸಿದರು. ಚೆನ್ನೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತಷ್ಟೆ. ಆರ್ಆರ್ ಪರ ಆ್ಯಡಂ ಝಂಪಾ 3 ಹಾಗೂ ಅಶ್ವಿನ್ 2 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 am, Fri, 28 April 23