T20 Max Clubs: ಆಸ್ಟ್ರೇಲಿಯಾ ಟಿ20 ಲೀಗ್ನಲ್ಲಿ ಅವಕಾಶ ಪಡೆದ ಭಾರತದ ಎಡಗೈ ವೇಗಿಗಳು..!
Mukesh Choudhary-Chetan Sakariya: ಈ ಇಬ್ಬರು ಆಟಗಾರರು ಟೂರ್ನಿಯಲ್ಲಿ ಭಾಗವಹಿಸುವುದಲ್ಲದೆ ಬೂಪಾ ನ್ಯಾಷನಲ್ ಕ್ರಿಕೆಟ್ ಸೆಂಟರ್ನಲ್ಲಿ ತರಬೇತಿ ಪಡೆಯಲಿದ್ದಾರೆ. ಇದಾದ ಬಳಿಕ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ ಮೂಲಕ ಸಂಚಲನ ಸೃಷ್ಟಿಸಿದ್ದ ಭಾರತದ ಯುವ ಬೌಲರ್ಗಳಾದ ಚೇತನ್ ಸಕರಿಯಾ (Chetan Sakariya) ಮತ್ತು ಮುಖೇಶ್ ಚೌಧರಿ (Mukesh Choudhary) ಆಸ್ಟ್ರೇಲಿಯಾದ ಟಿ20 ಮ್ಯಾಕ್ಸ್ ಟೂರ್ನಿಯ ಆರಂಭಿಕ ಸೀಸನ್ನಲ್ಲಿ ಆಡಲಿದ್ದಾರೆ. ಚೇತನ್ ಸಕರಿಯಾ ಮತ್ತು ಮುಖೇಶ್ ಚೌಧರಿ ಇಬ್ಬರೂ IPL ನ ಕೊನೆಯ ಸೀಸನ್ನಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಇದೀಗ ಈ ಇಬ್ಬರು ಎಡಗೈ ವೇಗಿಗಳಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಆಡುವ ಅವಕಾಶ ದೊರೆತಿದೆ. MRF ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ವಿನಿಮಯ ಕಾರ್ಯಕ್ರಮದ ಭಾಗವಾಗಿ ಇಬ್ಬರು ಆಟಗಾರರು ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶ ಸಿಕ್ಕಿದೆ.
ಅಲ್ಲದೆ ಈ ಅಭ್ಯಾಸದ ಭಾಗವಾಗಿ ಮುಂದಿನ ತಿಂಗಳು ನಡೆಯಲಿರುವ ಟಿ20 ಮ್ಯಾಕ್ಸ್ ಟೂರ್ನಿಯಲ್ಲೂ ಆಡುವ ಅವಕಾಶ ನೀಡಲಾಗುತ್ತದೆ. ಅದರಂತೆ ಭಾರತ ಯುವ ಎಡಗೈ ವೇಗಿಗಳು ಆಸ್ಟ್ರೇಲಿಯಾ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ತಮ್ಮ ಬೌಲಿಂಗ್ ಅಸ್ತ್ರಗಳನ್ನು ಪ್ರಯೋಗಿಸಲಿದ್ದಾರೆ.
ಎಂಆರ್‌ಎಫ್ ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಆಟಗಾರರ ವಿನಿಮಯ ಮತ್ತು ತರಬೇತಿ ಸುಮಾರು 20 ವರ್ಷಗಳಿಂದ ನಡೆಯುತ್ತಿದೆ. ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಪುನರಾರಂಭಿಸಲಾಗುತ್ತಿದ್ದು, ಈ ಬಾರಿ ಇಬ್ಬರು ಭಾರತೀಯ ಯುವ ಬೌಲರ್ಗಳು ಸ್ಥಾನ ಪಡೆದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಚೇತನ್ ಸಕರಿಯಾ ಕಳೆದ ವರ್ಷ ನಡೆದ ಶ್ರೀಲಂಕಾ ವಿರುದ್ಧದ ODI ಮತ್ತು T20 ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮುಖೇಶ್ ಚೌಧರಿ 13 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಇಬ್ಬರಿಗೂ ಎಂಆರ್‌ಎಫ್ ಪೇಸ್ ಫೌಂಡೇಷನ್ ಮೂಲಕ ಅವಕಾಶ ಸಿಕ್ಕಿದ್ದು, ಅದರಂತೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಸಕಾರಿಯಾ ಸನ್ ಶೈನ್ ಕೋಸ್ಟ್ ತಂಡದ ಪರ ಆಡಲಿದ್ದಾರೆ. ಹಾಗೆಯೇ ಮುಖೇಶ್ ಚೌಧರಿ ಅವರು ವಿನ್ನಮ್-ಮ್ಯಾನ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇನ್ನು ಈ ಇಬ್ಬರು ಆಟಗಾರರು ಟೂರ್ನಿಯಲ್ಲಿ ಭಾಗವಹಿಸುವುದಲ್ಲದೆ ಬೂಪಾ ನ್ಯಾಷನಲ್ ಕ್ರಿಕೆಟ್ ಸೆಂಟರ್ನಲ್ಲಿ ತರಬೇತಿ ಪಡೆಯಲಿದ್ದಾರೆ. ಇದಾದ ಬಳಿಕ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟಿ20 ಟೂರ್ನಿಯು ಆಗಸ್ಟ್ 18ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿದ್ದು, ಭಾರತದ ಯುವ ಎಡಗೈ ಬೌಲರ್ಗಳು ಹೇಗೆ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ.