ಐಪಿಎಲ್ ಬಳಿಕ ಮತ್ತೊಂದು ತಂಡವನ್ನು ಫೈನಲ್‌ಗೆ ಕೊಂಡೊಯ್ದ ಶ್ರೇಯಸ್ ಅಯ್ಯರ್
Mumbai T20 Final: ಶ್ರೇಯಸ್ ಅಯ್ಯರ್ ನಾಯಕತ್ವದ ಸೋಬೊ ಮುಂಬೈ ಫಾಲ್ಕನ್ಸ್ ತಂಡವು ಜೂನ್ 12 ರಂದು ಮುಂಬೈ ಟಿ20 ಲೀಗ್‌ನ ಫೈನಲ್‌ನಲ್ಲಿ ಮುಂಬೈ ಸೌತ್ ಸೆಂಟ್ರಲ್ ಮರಾಠಾ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್‌ನಲ್ಲಿ ಫಾಲ್ಕನ್ಸ್ ತಂಡವು ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.

ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಜೂನ್ 12 ರಂದು ಮತ್ತೊಂದು ಫೈನಲ್ ಪಂದ್ಯವನ್ನು ಆಡಲಿದ್ದಾರೆ. ಜೂನ್ 12 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಮುಂಬೈ ಟಿ20 ಲೀಗ್‌ನ (Mumbai T20 League) ಫೈನಲ್‌ನಲ್ಲಿ ಮುಂಬೈ ಸೌತ್ ಸೆಂಟ್ರಲ್ ಮರಾಠಾ ರಾಯಲ್ಸ್ ಹಾಗೂ ಸೋಬೊ ಮುಂಬೈ ಫಾಲ್ಕನ್ಸ್ ಮುಖಾಮುಖಿಯಾಗಲಿವೆ. ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ತನ್ನ ನಾಯಕತ್ವದಲ್ಲಿ ಪಂಜಾಬ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವಿಫಲರಾದರು. ಆದರೆ ಈ ಬಾರಿ ಶ್ರೇಯಸ್ ತನ್ನ ನಾಯಕತ್ವದಲ್ಲೇ ತಂಡವನ್ನು ಚಾಂಪಿಯನ್ ಮಾಡುವ ಇರಾದೆಯಲ್ಲಿದ್ದಾರೆ.
ಫೈನಲ್ಗೇರಿದ ಮುಂಬೈ ಫಾಲ್ಕನ್ಸ್ ತಂಡ
ವಾಸ್ತವವಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಸೋಬೊ ಮುಂಬೈ ಫಾಲ್ಕನ್ಸ್ ತಂಡ ಮುಂಬೈ ಟಿ20 ಲೀಗ್‌ನ ಫೈನಲ್‌ಗೆ ತಲುಪಿದೆ. ಇದೀಗ ಪ್ರಶಸ್ತಿ ಪಂದ್ಯದಲ್ಲಿ ಮುಂಬೈ ಸೌತ್ ಸೆಂಟ್ರಲ್ ಮರಾಠಾ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮರಾಠಾ ರಾಯಲ್ಸ್ ತಂಡವನ್ನು ರೋಹಿತ್ ಶರ್ಮಾ ಅವರ ತರಬೇತುದಾರ ದಿನೇಶ್ ಲಾಡ್ ಅವರ ಪುತ್ರ ಸಿದ್ದೇಶ್ ಲಾಡ್ ಮುನ್ನಡೆಸುತ್ತಿದ್ದಾರೆ. ಜೂನ್ 10 ರಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮರಾಠಾ ರಾಯಲ್ಸ್, ಈಗಲ್ ಥಾಣೆ ಸ್ಟ್ರೈಕರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಅದೇ ದಿನ ಎರಡನೇ ಸೆಮಿಫೈನಲ್‌ನಲ್ಲಿ ಸೋಬೊ ಮುಂಬೈ ಫಾಲ್ಕನ್ಸ್, ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತು.
ಎರಡನೇ ಸೆಮಿಫೈನಲ್ ಹೇಗಿತ್ತು?
ಮುಂಬೈ ಟಿ20 ಲೀಗ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂದ್ರಾ ಬ್ಲಾಸ್ಟರ್ಸ್ ತಂಡವು 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 130 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ತಂಡದ ಪರ ಧ್ರುಮಿಲ್ ಮಟ್ಕರ್ 30 ಎಸೆತಗಳಲ್ಲಿ ಅತಿ ಹೆಚ್ಚು 34 ರನ್ ಗಳಿಸಿದರೆ, ನಾಯಕ ಆಕಾಶ್ ಆನಂದ್ 28 ಎಸೆತಗಳಲ್ಲಿ 31 ರನ್‌ಗಳ ಇನ್ನಿಂಗ್ಸ್ ಆಡಿದರು.
ಇವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಮುಂಬೈ ಫಾಲ್ಕನ್ಸ್ ಪರ ಆಕಾಶ್ ಪರಾಕರ್ ಎರಡು ಓವರ್‌ಗಳಲ್ಲಿ 16 ರನ್ ನೀಡಿ ಮೂರು ವಿಕೆಟ್ ಪಡೆದರೆ, ಸಿದ್ಧಾರ್ಥ್ ರಾವತ್ ಎರಡು ವಿಕೆಟ್ ಪಡೆದರು. ಯಶ್ ಮತ್ತು ವಿನಾಯಕ್ ತಲಾ ಒಂದು ವಿಕೆಟ್ ಪಡೆದರು.
IPL 2025: ಶ್ರೇಯಸ್ ನನ್ನ ಕೆನ್ನೆಗೆ ಬಾರಿಸಿದ್ದರೆ ಚೆನ್ನಾಗಿರುತ್ತಿತ್ತು; ನಾಯಕ ಮಾಡಿದ್ದು ಸರಿ ಎಂದ ಶಶಾಂಕ್ ಸಿಂಗ್
32 ಎಸೆತಗಳಿರುವಂತೆಯೇ ಗೆಲುವು
ಇದಕ್ಕೆ ಉತ್ತರವಾಗಿ, ಸೊಬೊ ಮುಂಬೈ ಫಾಲ್ಕನ್ಸ್ ತಂಡವು 14.4 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಮುಂಬೈ ಫಾಲ್ಕನ್ಸ್ ಪರ ಇಶಾನ್ ಮುಲ್ಚಂದಾನಿ 34 ಎಸೆತಗಳಲ್ಲಿ ಅಜೇಯ 52 ರನ್‌ಗಳ ಇನ್ನಿಂಗ್ಸ್ ಆಡಿದರು. ಆಲ್‌ರೌಂಡರ್ ಆಕಾಶ್ ಪರಾಕರ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ 20 ಎಸೆತಗಳಲ್ಲಿ 32 ರನ್ ಬಾರಿಸಿದರು. ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೇವಲ ಒಂದು ರನ್‌ಗೆ ಔಟಾಗಿದ್ದರೂ, ಅವರ ತಂಡವು ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ