WTC 2025 final: ಭೋಜನ ವಿರಾಮಕ್ಕೂ ಮುನ್ನ ಆಸೀಸ್ ವಿರುದ್ಧ ಮೇಲುಗೈ ಸಾಧಿಸಿದ ಆಫ್ರಿಕಾ
WTC 2025 final: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ, ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಮೊದಲ ಸೆಷನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 67 ರನ್ ಗಳಿಸಿದೆ. ಕಗಿಸೊ ರಬಾಡ ಮತ್ತು ಮಾರ್ಕೊ ಯಾನ್ಸನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ. ಟ್ರಾವಿಸ್ ಹೆಡ್ 11 ರನ್ ಗಳಿಸಿ ಔಟಾದರು.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ (World Test Championship Final 2025) ಪಂದ್ಯ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (Australia vs South Africa) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ದಿನದಾಟದ ಭೋಜನ ವಿರಾಮದ ವೇಳೆಗೆ ಅಂದರೆ ಮೊದಲ ಸೆಷನ್ ಅಂತ್ಯಕ್ಕೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 67 ರನ್ ಗಳಿಸಿದೆ. ಭೋಜನ ವಿರಾಮಕ್ಕೆ ಸ್ವಲ್ಪ ಮೊದಲು 11 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಔಟಾಗಿದ್ದು, ಮಾರ್ಕೊ ಯಾನ್ಸನ್ ಅವರ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ವೆರೆನ್ಗೆ ಕ್ಯಾಚ್ ನೀಡುವ ಮೂಲಕ ಹೆಡ್ ತಮ್ಮ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಆಫ್ರಿಕಾ ಪರ ಇಲ್ಲಿಯವರೆಗೆ ಕಗಿಸೊ ರಬಾಡ ಮತ್ತು ಯಾನ್ಸನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾಗೆ ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆಯಲಿಲ್ಲ. ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ರಬಾಡ ಕಾಂಗರೂಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನಿಂಗ್ಸ್‌ನ ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಬೆಡಿಂಗ್‌ಹ್ಯಾಮ್‌ಗೆ ಉಸ್ಮಾನ್ ಖವಾಜಾ ಕ್ಯಾಚ್ ನೀಡಿದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಮರೂನ್ ಗ್ರೀನ್, ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿ ಔಟಾದರು. ಆರಂಭಿಕ ಖವಾಜ ಖಾತೆ ತೆರೆಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರೆ. ಗ್ರೀನ್ ಇನ್ನಿಂಗ್ಸ್ ಕೇವಲ ನಾಲ್ಕು ರನ್ಗಳಿಗೆ ಅಂತ್ಯವಾಯಿತು.
WTC 2025 final: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ; ಉಭಯ ತಂಡಗಳ ಪ್ಲೇಯಿಂಗ್-11 ಹೀಗಿದೆ
ಟ್ರಾವಿಸ್ ಹೆಡ್ ಔಟ್
ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನದ ನಂತರ ಮತ್ತಷ್ಟು ತಾಳ್ಮೆಯ ಆಟಕ್ಕೆ ಮುಂದಾದ ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಮೂರನೇ ವಿಕೆಟ್‌ಗೆ 30 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರು ಬೃಹತ್ ಜೊತೆಯಾಟ ನೀಡುತ್ತಾರೆ ಎನ್ನುತ್ತಿರುವಾಗಲೇ ದಾಳಿಗಿಳಿದ ಯಾನ್ಸನ್, ಲಬುಶೇನ್ ಅವರ ವಿಕೆಟ್ ಉರುಳಿಸಿದರು. ಲಬುಶೇನ್ 17 ರನ್ ಗಳಿಸಿ ಔಟಾದರೆ, ತಂಡದ ಬ್ಯಾಟಿಂಗ್ ಜೀವಾಳವಾಗಿದ್ದ ಟ್ರಾವಿಸ್ ಹೆಡ್ 11 ರನ್ ಬಾರಿಸಿ ಯಾನ್ಸನ್ಗೆ ವಿಕೆಟ್ ಒಪ್ಪಿಸಿದರು. ಪ್ರಸ್ತುತ, ಸ್ಟೀವ್ ಸ್ಮಿತ್ 51 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 26 ರನ್ ಗಳಿಸಿ ಅಜೇಯರಾಗಿದ್ದು, ಬ್ಯೂ ವೆಬ್‌ಸ್ಟರ್ ಬ್ಯಾಟಿಂಗ್ಗೆ ಬಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Wed, 11 June 25