
ಐಪಿಎಲ್ 2026 (IPL 2026) ರ ಮಿನಿ ಹರಾಜಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಬರೋಬ್ಬರಿ 9.2 ಕೋಟಿಗೆ ಖರೀದಿಸಿತು. ಈ ಮೂಲಕ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಬಾಂಗ್ಲಾದೇಶಿ ಆಟಗಾರ ಎನಿಸಿಕೊಂಡಿದ್ದರು. ಆದರೀಗ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ಆಡುವ ಬಗ್ಗೆ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯನ್ನು ಉಲ್ಲೇಖಿಸಿ ಅನೇಕ ಅಭಿಮಾನಿಗಳು ಮತ್ತು ಕೆಲವು ರಾಜಕೀಯ ವ್ಯಕ್ತಿಗಳು ಕೆಕೆಆರ್ ತಂಡವನ್ನು ಟೀಕಿಸುತ್ತಿದ್ದಾರೆ. ಹಾಗೆಯೇ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿ ತಂಡದಲ್ಲಿ ಆಡಲು ಅವಕಾಶ ನೀಡಿರುವ ಕೆಕೆಆರ್ ತಂಡದ ವಿರುದ್ಧ ಶಿವಸೇನೆ ವಕ್ತಾರ ಆನಂದ್ ದುಬೆ ಹರಿಹಾಯ್ದಿದ್ದು, ‘ಸನಾತನ ಮತ್ತು ಶಿವ ಸೈನಿಕನಾಗಿ, ತಾವು ಮತ್ತು ಇತರರು ಈ ಕ್ರಮವನ್ನು ವಿರೋಧಿಸುತ್ತೇವೆ. ರೆಹಮಾನ್ ಅವರನ್ನು ಐಪಿಎಲ್ ತಂಡದಿಂದ ತೆಗೆದುಹಾಕಿದರೆ ಶಾರುಖ್ ಖಾನ್ ಅವರ ಗೌರವ ಹಾಗೆಯೇ ಉಳಿಯುತ್ತದೆ. ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ಕ್ರಮವನ್ನು ಶಿವಸೇನೆ ಪಕ್ಷವು ಅನುಮತಿಸುವುದಿಲ್ಲ. ತಮ್ಮ ಪಕ್ಷವು ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಶತ್ರುಗಳೆಂದು ಪರಿಗಣಿಸುತ್ತದೆ. ಹೀಗಾಗಿ ಈ ದೇಶದ ಆಟಗಾರರನ್ನು ಸಂಪೂರ್ಣವಾಗಿ ಬಹಿಷ್ಕರಿಸುವವರೆಗೂ ನಾವು ವಿರಮಿಸುವುದಿಲ್ಲ. ದೇಶವಿರೋಧಿಗಳು ಭಾರತಕ್ಕೆ ಪ್ರವೇಶಿಸುವುದನ್ನು ಶಿವಸೇನೆ ವಿರೋಧಿಸುತ್ತದೆ. ಈ ವಿಷಯದಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸುತ್ತದೆ ಎಂದು ದುಬೆ ಹೇಳಿದ್ದಾರೆ.
ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಭಾರತ ಸರ್ಕಾರದ ಸೂಚನೆಗಳನ್ನು ಅನುಸರಿಸಿ, ಬಿಸಿಸಿಐ ಈ ವರ್ಷ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿದೆ. ಹೀಗಿರುವಾಗ ಮುಸ್ತಾಫಿಜುರ್ ಅವರನ್ನು ಕೆಕೆಆರ್ ಖರೀದಿಸಿರುವುದರ ಬಗ್ಗೆ ಅಸಮಾಧಾನ ಎದ್ದಿದೆ. ಹಿಂದಿನ ಐಪಿಎಲ್ ಹರಾಜಿನಲ್ಲಿ ಎಲ್ಲಾ ಬಾಂಗ್ಲಾದೇಶಿ ಆಟಗಾರರನ್ನು ಕಡೆಗಣಿಸಲಾಗಿತ್ತು, ಆದರೆ ಈ ಬಾರಿ ಕೆಕೆಆರ್ ಬಾಂಗ್ಲಾ ಆಟಗಾರನನ್ನು ಖರೀದಿ ಮಾಡಿದೆ.
IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹಿಂಸಾಚಾರ; ಕೆಕೆಆರ್ ತಂಡಕ್ಕೆ ಭಾರತೀಯರಿಂದ ಹಿಡಿಶಾಪ
ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ‘ಇದು ಸೂಕ್ಷ್ಮ ಪರಿಸ್ಥಿತಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ವಿಕಸನಗೊಳ್ಳುತ್ತಿರುವ ರಾಜತಾಂತ್ರಿಕ ಪರಿಸ್ಥಿತಿಯ ಕುರಿತು ನಾವು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಬಾಂಗ್ಲಾದೇಶಿ ಆಟಗಾರರನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಮುಸ್ತಾಫಿಜುರ್ ಐಪಿಎಲ್‌ನಲ್ಲಿ ಆಡುತ್ತಾರೆ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Fri, 2 January 26