ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ನಮೀಬಿಯಾ!

ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಸಣ್ಣ ದೇಶಗಳೂ ದೊಡ್ಡ ಇತಿಹಾಸ ಸೃಷ್ಟಿಸಬಲ್ಲವು ಎಂಬುದನ್ನು ನಮೀಬಿಯಾ ಕ್ರಿಕೆಟ್ ತಂಡ ಮತ್ತೊಮ್ಮೆ ಸಾಬೀತುಪಡಿಸಿದೆ. ವಿಂಡ್‌ಹೋಕ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ನಮೀಬಿಯಾ ತಂಡ 3-2 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ನಮೀಬಿಯಾ!
Namibia
Image Credit source: GettyImages

Updated on: Nov 02, 2026 | 10:50 AM

ಏಕದಿನ ಕ್ರಿಕೆಟ್‌ನಲ್ಲಿ ನಮೀಬಿಯಾ ತಂಡ ಹೊಸ ಇತಿಹಾಸ ಬರೆದಿದೆ. ವಿಂಡ್‌ಹೋಕ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ನಮೀಬಿಯಾ ತಂಡ 3-2 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನೊಂದಿಗೆ ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವೊಂದರ ವಿರುದ್ಧ ನಮೀಬಿಯಾ ತಂಡ ತನ್ನ ಚೊಚ್ಚಲ ಏಕದಿನ ಸರಣಿ ಜಯವನ್ನು ದಾಖಲಿಸಿದೆ.

ಅಂದರೆ,  ಕಳೆದ 23 ವರ್ಷಗಳಿಂದ ಏಕದಿನ ಕ್ರಿಕೆಟ್ ಆಡುತ್ತಿರುವ ನಮೀಬಿಯಾ ತಂಡವು, ಇದೇ ಮೊದಲ ಬಾರಿಗೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರವೊಂದರ ವಿರುದ್ಧ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ನಮೀಬಿಯಾ ಆಟಗಾರರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ಸುವರ್ಣ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಸರಣಿಯ ಫಲಿತಾಂಶ:

  1. ಮೊದಲ ಏಕದಿನ ಪಂದ್ಯ: ಐರ್ಲೆಂಡ್‌ಗೆ 55 ರನ್‌ಗಳ ಜಯ
  2. ಎರಡನೇ ಏಕದಿನ ಪಂದ್ಯ: ನಮೀಬಿಯಾಗೆ 31 ರನ್‌ಗಳ ಭರ್ಜರಿ ಜಯ
  3. ಮೂರನೇ ಏಕದಿನ ಪಂದ್ಯ: ನಮೀಬಿಯಾಗೆ 63 ರನ್‌ಗಳ ಗೆಲುವು
  4. ನಾಲ್ಕನೇ ಏಕದಿನ ಪಂದ್ಯ: ಐರ್ಲೆಂಡ್‌ಗೆ 130 ರನ್‌ಗಳ ಬೃಹತ್ ಜಯ
  5. ಐದನೇ ಏಕದಿನ ಪಂದ್ಯ: ನಮೀಬಿಯಾಗೆ 5 ವಿಕೆಟ್‌ಗಳ ಐತಿಹಾಸಿಕ ಜಯ.

ವಿಶ್ವಕಪ್‌ಗೂ ಮುನ್ನ ಶುಭ ಸೂಚನೆ!

2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ಜೊತೆಗೆ ನಮೀಬಿಯಾ ಕೂಡ ಸಹ-ಆತಿಥ್ಯ ವಹಿಸಲಿದೆ. ಈ ಮಹತ್ವದ ಟೂರ್ನಿಗಿಂತ ಮುಂಚಿತವಾಗಿ ಐರ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಮಣಿಸಿರುವುದು ನಮೀಬಿಯಾ ಕ್ರಿಕೆಟ್‌ನ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ. ಇದು ಅಸೋಸಿಯೇಟ್ ದೇಶಗಳ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಗೆಲುವಾಗಿದೆ.

ಇದಾಗ್ಯೂ ನಮೀಬಿಯಾ ತಂಡ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲೇಬೇಕು. ಅಂದರೆ, ಆತಿಥ್ಯ ದೇಶವಾಗಿದ್ದರೂ ನಮೀಬಿಯಾಗೆ ವಿಶ್ವಕಪ್‌ಗೆ ನೇರ ಅರ್ಹತೆ ಸಿಕ್ಕಿಲ್ಲ. ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವಕಪ್ ಜಂಟಿ ಆತಿಥ್ಯ ವಹಿಸುವ ದೇಶಗಳಲ್ಲಿ ಕೇವಲ ‘ಪೂರ್ಣ ಪ್ರಮಾಣದ ಸದಸ್ಯತ್ವ’ ಹೊಂದಿರುವ ದೇಶಗಳಿಗೆ ಮಾತ್ರ ನೇರ ಅರ್ಹತೆ ನೀಡಲಾಗುತ್ತದೆ.

ಹೀಗಾಗಿ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ಆತಿಥೇಯರ ಕೋಟಾದಡಿ ನೇರವಾಗಿ ವಿಶ್ವಕಪ್‌ಗೆ ಲಗ್ಗೆ ಇಟ್ಟಿವೆ. ಆದರೆ ನಮೀಬಿಯಾ ಇನ್ನು ಕೂಡ ‘ಅಸೋಸಿಯೇಟ್ ಸದಸ್ಯ ರಾಷ್ಟ್ರ’ ಆಗಿರುವುದರಿಂದ, ತವರು ಮೈದಾನದಲ್ಲೇ ವಿಶ್ವಕಪ್ ಪಂದ್ಯಗಳು ನಡೆದರೂ ಅದು ಕಠಿಣ ಅರ್ಹತಾ ಹಾದಿಯನ್ನು ದಾಟಿಯೇ ಬರಬೇಕಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್​ಗೆ ಡಬಲ್ ಶಾಕ್!

ಒಟ್ಟಿನಲ್ಲಿ  ಐರ್ಲೆಂಡ್ ವಿರುದ್ಧದ ಈ ಐತಿಹಾಸಿಕ ಸರಣಿ ಗೆಲುವು ನಮೀಬಿಯಾ ಕ್ರಿಕೆಟ್‌ಗೆ ಕೇವಲ ಒಂದು ಗೆಲುವಲ್ಲ. ಇದು ಜಾಗತಿಕ ಕ್ರಿಕೆಟ್ ಭೂಪಟದಲ್ಲಿ ತಾವೂ ಒಂದು ಬಲಿಷ್ಠ ಶಕ್ತಿ ಎಂಬುದನ್ನು ಜಗತ್ತಿಗೆ ಸಾರಿದ ಮಹತ್ವದ ಮೈಲಿಗಲ್ಲು. 2027ರ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಹಾದಿ ಕಠಿಣವಾಗಿದ್ದರೂ, ಇಂತಹ ಐತಿಹಾಸಿಕ ಪ್ರದರ್ಶನಗಳು ತಂಡದಲ್ಲಿ ಹೊಸ ಸಂಚಲನ ಮೂಡಿಸಿರುವುದಂತು ಸುಳ್ಳಲ್ಲ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us