ಏಕದಿನ ವಿಶ್ವಕಪ್ (ODI World Cup 2023) ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಕ್ರಿಕೆಟ್ ಮಹಾಸಮರಕ್ಕಾಗಿ ನೆದರ್ಲೆಂಡ್ಸ್ (Netherlands) ತಂಡವು ಮಾಸ್ಟರ್ ಪ್ಲ್ಯಾನ್ ರೂಪಿಸಲು ಮುಂದಾಗಿದೆ. ಇದಕ್ಕಾಗಿ ಸೆಪ್ಟೆಂಬರ್ 19 ರಂದೇ ಬೆಂಗಳೂರಿಗೆ ಆಗಮಿಸಿದೆ. ಅಂದರೆ ಏಕದಿನ ವಿಶ್ವಕಪ್ಗೂ ಮುಂಚಿತವಾಗಿ ನೆದರ್ಲೆಂಡ್ಸ್ ತಂಡವು ಬೆಂಗಳೂರಿನಲ್ಲಿ ವಿಶೇಷ ಅಭ್ಯಾಸ ಶಿಬಿರ ಏರ್ಪಡಿಸಲಿದೆ.
ಈ ಬಗ್ಗೆ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಜೊತೆ ಚರ್ಚಿಸಿದ್ದು, ಅದರಂತೆ ಏಕದಿನ ವಿಶ್ವಕಪ್ ಆರಂಭಕ್ಕೂ 12 ದಿನಗಳು ಮುಂಚಿತವಾಗಿ ಆಲೂರಿನ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.
ಅರ್ಹತಾ ಸುತ್ತಿನ ಮೂಲಕ ಎಂಟ್ರಿ: ಈ ಬಾರಿಯ ಏಕದಿನ ವಿಶ್ವಕಪ್ಗೆ ನೆದರ್ಲೆಂಡ್ಸ್ ತಂಡವು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಟ್ಟಿದೆ. ಅದು ಕೂಡ ವೆಸ್ಟ್ ಇಂಡೀಸ್ (West Indies) ಹಾಗೂ ಝಿಂಬಾಬ್ವೆ (Zimbabwe) ತಂಡಗಳನ್ನು ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ.
ಮೊದಲ ಪಂದ್ಯ: ನೆದರ್ಲೆಂಡ್ಸ್ ತಂಡವು ತನ್ನ ವಿಶ್ವಕಪ್ 2023 ಅಭಿಯಾನವನ್ನು ಪಾಕಿಸ್ತಾನದ ವಿರುದ್ಧ ಆರಂಭಿಸಲಿದೆ. ಈ ಪಂದ್ಯವು ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ವಿರುದ್ಧದ ಪಂದ್ಯ: ನವೆಂಬರ್ 11 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿದೆ.
ವಿಶ್ವಕಪ್ ಕನಸು: ನೆದರ್ಲೆಂಡ್ಸ್ ತಂಡವು ಏಕದಿನ ವಿಶ್ವಕಪ್ನಲ್ಲಿ ಕೇವಲ 4 ಬಾರಿ ಮಾತ್ರ ಕಾಣಿಸಿಕೊಂಡಿತ್ತು. 1996 ರಲ್ಲಿ ಚೊಚ್ಚಲ ವಿಶ್ವಕಪ್ ಆಡಿದ್ದ ಡಚ್ಚರು, ಆ ಬಳಿಕ 2003, 2007 ಮತ್ತು 2011 ರ ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದರು. ಇದೀಗ ಐದನೇ ಬಾರಿ ವಿಶ್ವಕಪ್ ಕನಸಿನೊಂದಿಗೆ ಭಾರತಕ್ಕೆ ಬರಲಿದೆ.
ನೆದರ್ಲೆಂಡ್ಸ್ ತಂಡದ ಏಕದಿನ ವಿಶ್ವಕಪ್ ವೇಳಾಪಟ್ಟಿ:
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಇನ್ನು ಟೀಮ್ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 8 ರಂದು ಆರಂಭಿಸಲಿದ್ದು, ಚೆನ್ನೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಭಾರತ-ಪಾಕ್ (India vs Pakistan) ಮುಖಾಮುಖಿ ಯಾವಾಗ?
ಈ ಹಿಂದಿನ ವೇಳಾಪಟ್ಟಿಯಲ್ಲಿ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಇದೇ ದಿನದಂದು ನವರಾತ್ರಿ ಹಬ್ಬ ಕೂಡ ಶುರುವಾಗುತ್ತಿದೆ. ಅತ್ತ ಗುಜರಾತ್ನಾದ್ಯಂತ ಅಕ್ಟೋಬರ್ 15 ರಂದು ಗರ್ಬಾ ಕಾರ್ಯಕ್ರಮಗಳು ನಡೆಯಲಿದ್ದು, ಹೀಗಾಗಿ ಈ ಪಂದ್ಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಹೊಸ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.