
ಭಾರತ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ನ್ಯೂಝಿಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.
ವರದಿಗಳ ಪ್ರಕಾರ, ಇತ್ತೀಚೆಗೆ ನಡೆದ ಪ್ರಚಾರದ ಶೂಟಿಂಗ್ ಒಂದರಲ್ಲಿ ಪಾಲ್ಗೊಂಡಿದ್ದಾಗ ರಚಿನ್ ರವೀಂದ್ರ ಅವರು ಡೈವಿಂಗ್ ಕ್ಯಾಚ್ ಹಿಡಿಯಲು ಹೋಗಿ ಸುರಕ್ಷತಾ ಮ್ಯಾಟ್ ಮೇಲೆ ತಪ್ಪಾಗಿ ಬಿದ್ದಿದ್ದಾರೆ. ಈ ವೇಳೆ ಅವರ ಬಲ ಹೆಗಲಿನ ಮೂಳೆ ಜಾರಿದ್ದು , ತೀವ್ರ ಗಾಯಗೊಂಡಿದ್ದಾರೆ.
ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ರವೀಂದ್ರ ಅವರಿಗೆ ಕನಿಷ್ಠ ಆರು ವಾರಗಳ ಸುದೀರ್ಘ ಪುನಶ್ಚೇತನ ಅವಧಿಯ ಅಗತ್ಯವಿದೆ. ಹೀಗಾಗಿ ಅಕ್ಟೋಬರ್ 22 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಆಡುತ್ತಿಲ್ಲ. ಆದಾಗ್ಯೂ, ನವೆಂಬರ್ 4 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ವೇಳೆಗೆ ಅವರು ಚೇತರಿಸಿಕೊಂಡು ತಂಡವನ್ನು ಸೇರಿಕೊಳ್ಳಬಹುದು ಎಂಬ ಆಶಾವಾದವನ್ನು ಮಂಡಳಿ ವ್ಯಕ್ತಪಡಿಸಿದೆ.
ಮಿಚೆಲ್ ಸ್ಯಾಂಟ್ನರ್ ನಾಯಕತ್ವದ 16 ಸದಸ್ಯರ ಕಿವೀಸ್ ಪಡೆಯಲ್ಲಿ ರಚಿನ್ ಅನುಪಸ್ಥಿತಿಯನ್ನು ತುಂಬಲು ಬೆವನ್ ಜೇಕಬ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದರೊಂದಿಗೆ, ಒಂದು ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದ ಅನುಭವಿ ವೇಗಿ ಆಡಮ್ ಮಿಲ್ನ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಭಾರತದ ಪ್ರವಾಸದ ಪ್ರಮುಖ ಆಕರ್ಷಣೆಯಾಗಿದ್ದ ರಚಿನ್ ರವೀಂದ್ರ ಅವರ ಗೈರುಹಾಜರಿ ನ್ಯೂಝಿಲೆಂಡ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ ಎನ್ನಬಹುದು. ಇದಾಗ್ಯೂ ನ್ಯೂಝಿಲೆಂಡ್ ತಂಡ ಟೀಮ್ ಇಂಡಿಯಾಗೆ ಭರ್ಜರಿ ಪೈಪೋಟಿ ನೀಡುವುದನ್ನು ಎದುರು ನೋಡಬಹುದು.
ಇದನ್ನೂ ಓದಿ: ಸಿಎಸ್‌ಕೆ ಪ್ಲೇಯಿಂಗ್ 11 ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ!
ಭಾರತದ ವಿರುದ್ಧದ ಸರಣಿಗೆ ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಲಾಕಿ ಫರ್ಗುಸನ್, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವನ್ ಜೇಕಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್ ಮತ್ತು ನಾಥನ್ ಸ್ಮಿತ್.