New zealand vs Australia Final: ನ್ಯೂಜಿಲೆಂಡ್ vs ಆಸ್ಟ್ರೇಲಿಯಾ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?
T20 World Cup 2021 Final: ಫೆಬ್ರವರಿ 16, 2018 ರಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 243 ರನ್ಗಳ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ (245 ರನ್) ಗುರಿ ಮುಟ್ಟಿತ್ತು. ಇದು ಉಭಯ ತಂಡಗಳ ಗರಿಷ್ಠ ಸ್ಕೋರ್ ಆಗಿದೆ.
ಟಿ20 ವಿಶ್ವಕಪ್ ಫೈನಲ್ (T20 World Cup 2021 Final) ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ (New zealand vs Australia Final) ಮುಖಾಮುಖಿಯಾಗಲಿದೆ. ಉಭಯ ತಂಡಗಳು 2015ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಹೀಗಾಗಿಯೇ ಎರಡೂ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಸೂಪರ್-12 ಹಂತದಲ್ಲಿ 5 ರಲ್ಲಿ ನಾಲ್ಕು ಗೆಲುವು ದಾಖಲಿಸಿ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಿತ್ತು. ಅದರಲ್ಲೂ ಎರಡೂ ತಂಡಗಳು ಗ್ರೂಪ್-1, ಗ್ರೂಪ್-2ನಲ್ಲಿನ 2ನೇ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿತ್ತು ಎಂಬುದು ವಿಶೇಷ.
ಇದೀಗ ಸೂಪರ್ 12 ನಲ್ಲಿ 2ನೇ ಸ್ಥಾನ ಪಡೆದಿದ್ದ ಎರಡೂ ತಂಡಗಳು ಫೈನಲ್ ಪ್ರವೇಶಿಸಿದೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ. ಈ ಹಿಂದೆ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 14 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ನ್ಯೂಜಿಲೆಂಡ್ ಗೆದ್ದಿದ್ದು 5 ಬಾರಿ ಮಾತ್ರ. ಅಂದರೆ 9 ಗೆಲುವಿನೊಂದಿಗೆ ಆಸ್ಟ್ರೇಲಿಯಾ ಕಿವೀಸ್ ವಿರುದ್ದ ಮೇಲುಗೈ ಹೊಂದಿದೆ. ಇನ್ನು ಉಭಯ ತಂಡಗಳು ಟಿ20 ವಿಶ್ವಕಪ್ನಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದ್ದು, ಅದರಲ್ಲಿ ನ್ಯೂಜಿಲೆಂಡ್ ಗೆದ್ದಿರುವುದು ವಿಶೇಷ.
ಇನ್ನು ಉಭಯ ತಂಡಗಳ ಮುಖಾಮುಖಿಯಲ್ಲಿನ ಅಂಕಿ ಅಂಶಗಳನ್ನು ಗಮನಿಸುವುದಾದರೆ….
ಗರಿಷ್ಠ ತಂಡದ ಮೊತ್ತ: ಫೆಬ್ರವರಿ 16, 2018 ರಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 243 ರನ್ಗಳ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ (245 ರನ್) ಗುರಿ ಮುಟ್ಟಿತ್ತು. ಇದು ಉಭಯ ತಂಡಗಳ ಗರಿಷ್ಠ ಸ್ಕೋರ್ ಆಗಿದೆ.
ಕನಿಷ್ಠ ತಂಡದ ಮೊತ್ತ: ಮಾರ್ಚ್ 5, 2021 ರಂದು ಆಸ್ಟ್ರೇಲಿಯಾ ನೀಡಿದ 157 ರನ್ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 106 ರನ್‌ಗಳಿಗೆ ಆಲೌಟ್ ಆಗಿತ್ತು.
ಅತ್ಯಧಿಕ ವೈಯಕ್ತಿಕ ಸ್ಕೋರ್ : ಫೆಬ್ರವರಿ 2010 ರಲ್ಲಿ ನಡೆದ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಮ್ 56 ಎಸೆತಗಳಲ್ಲಿ 116 ರನ್ ಬಾರಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್. ಆದರೆ ಇದೀಗ ಮೆಕಲಮ್ ತಂಡದಲ್ಲಿಲ್ಲ. ಹೀಗಾಗಿ ಇದು ಪರಿಗಣನೆಗೆ ಬರುವುದಿಲ್ಲ.
ಅತ್ಯುತ್ತಮ ಬೌಲಿಂಗ್ ಅಂಕಿ ಅಂಶ: ಮಾರ್ಚ್ 2021 ರಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದ ಆಸ್ಟ್ರೇಲಿಯಾದ ಅಷ್ಟನ್ ಅಗರ್ 6/30 ವಿಕೆಟ್ ಪಡೆದಿರುವುದು ಉಭಯ ತಂಡಗಳ ಮುಖಾಮುಖಿಯಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.
ಟಾಪ್ ರನ್ ಸ್ಕೋರರ್: ನ್ಯೂಜಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಆಸ್ಟ್ರೇಲಿಯಾ ವಿರುದ್ದ 12 ಪಂದ್ಯಗಳಲ್ಲಿ 36.25ರ ಸರಾಸರಿಯಲ್ಲಿ 435 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿವೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಗಪ್ಟಿಲ್ ಟಾಪ್ ಸ್ಕೋರರ್. ಹೀಗಾಗಿ ಪ್ರಸ್ತುತ ನ್ಯೂಜಿಲೆಂಡ್ ತಂಡದ ಆರಂಭಿಕರಾಗಿರುವ ಗಪ್ಟಿಲ್ ತಂಡದ ಶಕ್ತಿಯಾಗಿದ್ದಾರೆ.
ಟಾಪ್ ವಿಕೆಟ್ ಟೇಕರ್: ನ್ಯೂಜಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಉಭಯ ತಂಡಗಳ ಮುಖಾಮುಖಿಯಲ್ಲಿ ಇಶ್ ಸೋಧಿ ಗೇಮ್ ಚೇಂಜರ್ ಆಗಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲೂ ಇಶ್ ಸೋಧಿ ನ್ಯೂಜಿಲೆಂಡ್ ತಂಡದ ಟ್ರಂಪ್ ಕಾರ್ಡ್ ಆಗಲಿದ್ದಾರೆ.
ಇಲ್ಲಿ ಪಂದ್ಯಗಳ ಫಲಿತಾಂಶಗಳ ಅಂಕಿ ಅಂಶಗಳಲ್ಲಿ ಆಸ್ಟ್ರೇಲಿಯಾ ಮೇಲುಗೈ ಹೊಂದಿದ್ದರೂ, ಆಟಾಗರರ ಪ್ರದರ್ಶನದ ಅಂಕಿ ಅಂಶಗಳಲ್ಲಿ ನ್ಯೂಜಿಲೆಂಡ್ ಪ್ಲೇಯರ್ಸ್ ಮುಂದಿದ್ದಾರೆ. ಹೀಗಾಗಿ ಉಭಯ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು. ಅದರಂತೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ
(new zealand vs australia head to head t20)