
ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಅಕ್ಷರಶಃ ರಣರೋಚಕ ತಿರುವುಗಳಿಗೆ ಸಾಕ್ಷಿಯಾಯಿತು. ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆದ ಈ ಪಂದ್ಯದಲ್ಲಿ ಭಾರತ ಮೂಲದ ಆಲ್‌ರೌಂಡರ್ ನಿಖಿಲ್ ಚೌಧರಿ ಅವರ ಭರ್ಜರಿ ಆಲ್‌ರೌಂಡ್ ಪ್ರದರ್ಶನದ ಬಲದಿಂದ ಆಸ್ಟ್ರೇಲಿಯಾ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಹ್ಯಾರಿ ಬ್ರೂಕ್ ಸ್ಫೋಟಕ ಆರಂಭ ಒದಗಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ 28 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಫೋರ್ಗಳೊಂದಿಗೆ 65 ರನ್ ಚಚ್ಚಿ ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ಮತ್ತೊಂದೆಡೆ ಟಾಮ್ ಬ್ಯಾಂಟನ್ (39 ರನ್) ಕೂಡ ಉತ್ತಮ ಸಾಥ್ ನೀಡಿದ್ದರಿಂದ ಇಂಗ್ಲೆಂಡ್ ಕೇವಲ 10 ಓವರ್‌ಗಳಲ್ಲಿ 119 ರನ್ ಕಲೆಹಾಕಿ ಬೃಹತ್ ಮೊತ್ತದ ಸೂಚನೆ ನೀಡಿತ್ತು.
ಆದರೆ, ಮಧ್ಯಮ ಓವರ್‌ಗಳಲ್ಲಿ ದಾಳಿಗಿಳಿದ ನಿಖಿಲ್ ಚೌಧರಿ ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಪಾಯಕಾರಿಯಾಗಿ ಆಡುತ್ತಿದ್ದ ಬ್ರೂಕ್ ಮತ್ತು ಸ್ಯಾಮ್ ಕರ್ರನ್ ವಿಕೆಟ್ ಕಬಳಿಸಿದ ನಿಖಿಲ್ (4 ಓವರ್‌ಗಳಲ್ಲಿ 2/21), ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
188 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ನಾಯಕ ಮಿಚೆಲ್ ಮಾರ್ಷ್ (37 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಇಂಗ್ಲೆಂಡ್ ಬೌಲರ್‌ಗಳ ನಿಯಂತ್ರಿತ ದಾಳಿಯಿಂದಾಗಿ ಆಸೀಸ್ ಮಧ್ಯಮ ಕ್ರಮಾಂಕ ಕೊಂಚ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ದೆಹಲಿ ಮೂಲದ ನಿಖಿಲ್ ಚೌಧರಿ, ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ತಮ್ಮ ವೃತ್ತಿಜೀವನದ ನಾಲ್ಕನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುತ್ತಿರುವ ನಿಖಿಲ್, ಕೇವಲ 38 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 66 ರನ್ ಚಚ್ಚಿ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ದಾಖಲಿಸಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಟಿ20ಯಲ್ಲಿ ಅರ್ಧಶತಕ ಹಾಗೂ 2ಕ್ಕೂ ಹೆಚ್ಚು ವಿಕೆಟ್ ಪಡೆದ ಶೇನ್ ವ್ಯಾಟ್ಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಂತರದ ಮೂರನೇ ಆಸ್ಟ್ರೇಲಿಯನ್ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾದರು.
18ನೇ ಓವರ್‌ನಲ್ಲಿ ನಿಖಿಲ್ ಚೌಧರಿ ಔಟಾದಾಗ ಪಂದ್ಯ ಮತ್ತೆ ಇಂಗ್ಲೆಂಡ್ ಕಡೆ ವಾಲಿತ್ತು. ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾದ ಗೆಲುವಿಗೆ 11 ರನ್‌ಗಳ ಅವಶ್ಯಕತೆಯಿತ್ತು. ಸ್ಯಾಮ್ ಕರನ್ ಎಸೆದ ಕೊನೆಯ ಓವರ್‌ನಲ್ಲಿ ಜ್ಯಾಕ್ ಎಡ್ವರ್ಡ್ಸ್ (ಅಜೇಯ 25 ರನ್, 11 ಎಸೆತ) ಭರ್ಜರಿ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಇನ್ನೂ 1 ಎಸೆತ ಬಾಕಿ ಇರುವಂತೆಯೇ ಆಸ್ಟ್ರೇಲಿಯಾವನ್ನು ಗೆಲುವಿನ ದಡ ಸೇರಿಸಿದರು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಐತಿಹಾಸಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ನಿಖಿಲ್ ಚೌಧರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಇನ್ನು ಈ ಸರಣಿಯ ಎರಡನೇ ಪಂದ್ಯವು ಮಂಗಳವಾರ (ನವೆಂಬರ್ 24) ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮಿಚೆಲ್ ಮಾರ್ಷ್ (ನಾಯಕ) , ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್) , ನಿಖಿಲ್ ಚೌಧರಿ , ಟಿಮ್ ಡೇವಿಡ್ , ಲಾಚ್ಲನ್ ಶಾ , ಜ್ಯಾಕ್ ಎಡ್ವರ್ಡ್ಸ್ , ಜೋಯಲ್ ಡೇವಿಸ್ , ಬೆನ್ ದ್ವಾರಶುಯಿಸ್ , ಆ್ಯಡಂ ಜಂಪಾ , ರಿಲೇ ಮೆರೆಡಿತ್.
ಇದನ್ನೂ ಓದಿ: ಟೆಸ್ಟ್ ಇತಿಹಾಸದಲ್ಲಿ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್ , ಅನ್ಯೂರಿನ್ ಡೊನಾಲ್ಡ್ , ಹ್ಯಾರಿ ಬ್ರೂಕ್ (ನಾಯಕ) , ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್ ), ಟಾಮ್ ಬ್ಯಾಂಟನ್ , ವಿಲ್ ಜ್ಯಾಕ್ಸ್ , ಸ್ಯಾಮ್ ಕರನ್ , ಜೇಮೀ ಓವರ್ಟನ್ , ಲಿಯಾಮ್ ಡಾಸನ್ , ಆದಿಲ್ ರಶೀದ್ , ಹೆನ್ರಿ ಕ್ರೊಕೊಂಬೆ.