ಕೋವಿಡ್ನಿಂದ ಖುಲಾಯಿಸಿದ ಅದೃಷ್ಟ: ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯನ ಎಂಟ್ರಿ!
Australia Squad: ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಗುರಿಂದರ್ ಸಂಧು ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಇವರು ಯಾರು ಕೂಡ ಭಾರತದಲ್ಲಿ ಜನಿಸಿದವರಲ್ಲ. ಬದಲಾಗಿ ಅವರ ಪೋಷಕರು ಭಾರತೀಯರಾಗಿದ್ದರಿಂದ ಭಾರತೀಯ ಮೂಲದವರಾಗಿ ಗುರುತಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಭಾರತೀಯ ಆಟಗಾರನೊಬ್ಬ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ನಿಖಿಲ್ ಚೌಧರಿ ಸ್ಥಾನ ಪಡೆದಿದ್ದಾರೆ. 30 ವರ್ಷದ ನಿಖಿಲ್ ದೆಹಲಿ ಮೂಲದ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ತಂಡದ ಪರವಾಗಿ ಟಿ20 ಮತ್ತು ಲಿಸ್ಟ್-ಎ ಕ್ರಿಕೆಟ್ ಕೂಡ ಆಡಿದ್ದರು. ಆದರೆ ಕೋವಿಡ್ ಸಂದರ್ಭದಲ್ಲಿನ ಒಂದು ಟ್ವಿಸ್ಟ್ ನಿಖಿಲ್ ಅವರ ಕೆರಿಯರ್ ಅನ್ನೇ ಬದಲಿಸಿರುವುದು ವಿಶೇಷ.
ನಿಖಿಲ್ ರೋಚಕ ಪ್ರಯಣ:
ನಿಖಿಲ್ ಚೌಧರಿ ಅವರ ಕ್ರಿಕೆಟ್ ಜೀವನದ ಹಾದಿ ಸಾಮಾನ್ಯವಾದದ್ದಲ್ಲ. ಇದು ಕಠಿಣ ಪರಿಶ್ರಮ ಮತ್ತು ಅದ್ಭುತ ಆಕಸ್ಮಿಕಗಳಿಂದ ಕೂಡಿದೆ. ಏಕೆಂದರೆ ಪಂಜಾಬ್‌ನಲ್ಲಿ ಬೆಳೆದ ನಿಖಿಲ್, ಆರಂಭದಲ್ಲಿ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದರು. ಪಂಜಾಬ್ ಪರ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಯುವರಾಜ್ ಸಿಂಗ್, ಹರಭಜನ್ ಸಿಂಗ್, ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಭಾರತದ ಪರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕನಸು ಕಟ್ಟಿಕೊಂಡಿದ್ದರು.
ಇದರ ನಡುವೆ, ಅಂದರೆ 2020ರ ಮಾರ್ಚ್‌ನಲ್ಲಿ ನಿಖಿಲ್ ಪ್ರವಾಸಿ ವೀಸಾದಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಸಂಬಂಧಿಕರನ್ನು ನೋಡಲು ಹೋಗಿದ್ದರು. ಆದರೆ ಅದೇ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತರರಾಷ್ಟ್ರೀಯ ಗಡಿಗಳು ಮುಚ್ಚಲ್ಪಟ್ಟಿದ್ದರಿಂದ ಅವರು ಅಲ್ಲೇ ಸಿಲುಕಿಕೊಳ್ಳಬೇಕಾಯಿತು.
ಆಸ್ಟ್ರೇಲಿಯಾದಲ್ಲಿ ಜೀವನ ಸಾಗಿಸಲು ಮತ್ತು ತಮ್ಮ ಕ್ರಿಕೆಟ್ ಕನಸನ್ನು ಜೀವಂತವಾಗಿಡಲು ನಿಖಿಲ್ ಚೌಧರಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ಪೋಸ್ಟ್‌ನಲ್ಲಿ ಕೊರಿಯರ್ ಬಾಯ್ ಆಗಿ, ಉಬರ್ ಚಾಲಕನಾಗಿ ಮತ್ತು ಮೆಕ್ಸಿಕನ್ ರೆಸ್ಟೋರೆಂಟ್ ಒಂದರಲ್ಲಿ ವೈಟರ್, ಡೆಲಿವರಿ ಬಾಯ್ ಆಗಿಯೂ ಕಾರ್ಯ ನಿರ್ವಹಿಸಿದರು.
ಹಗಲಿನಲ್ಲಿ ಕೆಲಸ ಮಾಡುತ್ತಲೇ ರಾತ್ರಿ ಮತ್ತು ವಾರಾಂತ್ಯದಲ್ಲಿ ಬ್ರಿಸ್ಬೇನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು. ಅವರ ಭರ್ಜರಿ ಬ್ಯಾಟಿಂಗ್ ಮತ್ತು ಲೆಗ್-ಸ್ಪಿನ್ ಬೌಲಿಂಗ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೇಮ್ಸ್ ಹೋಪ್ಸ್ ಅವರ ಗಮನ ಸೆಳೆಯಿತು. ಅವರ ಶಿಫಾರಸಿನ ಮೇರೆಗೆ ಬಿಗ್ ಬ್ಯಾಷ್ ಲೀಗ್ (BBL) ತಂಡವಾದ ಹೊಬಾರ್ಟ್ ಹರಿಕೇನ್ಸ್ ನಿಖಿಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.
ಖುಲಾಯಿಸಿದ ಅದೃಷ್ಟ:
ಒಮ್ಮೆ ಬಿಗ್ ಬ್ಯಾಷ್ ಲೀಗ್ ಪ್ರವೇಶಿಸಿದ ನಂತರ ನಿಖಿಲ್ ಚೌಧರಿ ಹಿಂದೆ ತಿರುಗಿ ನೋಡಲಿಲ್ಲ. ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಸ್ಟಾರ್ ಆದರು. ಉನ್ಮುಕ್ತ್ ಚಂದ್ ನಂತರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹೋಬಾರ್ಟ್ ಹರಿಕೇನ್ಸ್ ತಂಡದ ಪರ ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ, ತಮ್ಮ ವಿಶಿಷ್ಟ ಶೈಲಿಯ “ಥೈ-ಫೈವ್” (ತೊಡೆ ತಟ್ಟುವ) ಸಂಭ್ರಮಾಚರಣೆಯ ಮೂಲಕ ಅಭಿಮಾನಿಗಳ ನೆಚ್ಚಿನ ಆಟಗಾರರಾದರು. ಬಿಬಿಎಲ್ನ ಅದ್ಭುತ ಪ್ರದರ್ಶನದಿಂದಾಗಿ ಟ್ಯಾಸ್ಮೆನಿಯಾ ತಂಡದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ಒಪ್ಪಂದ ಸಿಕ್ಕಿತು.
ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ನಿಖಿಲ್ ಚೌಧರಿ ತಮ್ಮ ಚೊಚ್ಚಲ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲೇ ಕ್ವೀನ್ಸ್‌ಲ್ಯಾಂಡ್ ವಿರುದ್ಧ 5 ವಿಕೆಟ್ ಪಡೆದು ಮಿಂಚಿದರು.
ಅಲ್ಲದೆ ನವೆಂಬರ್ 2025 ರಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ಕೇವಲ 184 ಎಸೆತಗಳಲ್ಲಿ 163 ರನ್ ಚಚ್ಚಿದರು. ಈ ಮೂಲಕ 21ನೇ ಶತಮಾನದಲ್ಲಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಳೆ ನಿರ್ಮಿಸಿದರು.
ನಿಖಿಲ್ ಅವರ ಈ ಅತ್ಯುತ್ತಮ ಪ್ರದರ್ಶನಗಳು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿಒತಿಯ ಗಮನ ಸೆಳೆಯಿತು. ಹೀಗಾಗಿ ಯುವ ಆಲ್ರೌಂಡರ್ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದರು. ಅದರಂತೆ ಇದೀಗ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ನಿಖಿಲ್ ಚೌಧರಿಯನ್ನು ಆಯ್ಕೆ ಮಾಡಲಾಗಿದೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಕ್ರಿಕೆಟ್ ಕನಸು ಕೈತಪ್ಪಿ, ಜೀವನ ನಿರ್ವಹಣೆಗಾಗಿ ಆಸ್ಟ್ರೇಲಿಯಾದ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದ ನಿಖಿಲ್ ಚೌಧರಿ, ಇಂದು ಅದೇ ದೇಶದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಅವರ ಕಠಿಣ ಪರಿಶ್ರಮ ಮತ್ತು ಅದಮ್ಯ ಚೇತನಕ್ಕೆ ಸಾಕ್ಷಿ. ಬಾಂಗ್ಲಾದೇಶ್ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಈ ಪಂಜಾಬ್ ಯುವಕ ಕಾಂಗರೂ ಪಡೆಯ ಪರವಾಗಿ ಅಬ್ಬರಿಸಿ, ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ.
ಇದನ್ನೂ ಓದಿ: 200ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!
ಆಸ್ಟ್ರೇಲಿಯಾ ಟಿ20 ತಂಡ:
ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್‌ಶಾ, ನಿಖಿಲ್ ಚೌಧರಿ, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಕೂಪರ್ ಕಾನೋಲಿ, ಜೋಯಲ್ ಡೇವಿಸ್, ಆಡಮ್ ಜಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಮತ್ತು ರೈಲಿ ಮೆರೆಡಿತ್ ಇದ್ದಾರೆ.




