
2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಫೈನಲ್‌ನಲ್ಲಿ ನ್ಯೂಜಿಲೆಂಡ್ ನೀಡಿರುವ 251 ರನ್‌ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಗಳಿಸಿದ್ದಾರೆ. ಕೇವಲ 41 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ಗೆ ಈ ಅರ್ಧಶತಕವು ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಅರ್ಧಶತಕ ಐಸಿಸಿ ಫೈನಲ್‌ನಲ್ಲಿ ಇದು ಅವರ ಮೊದಲ ಅರ್ಧಶತಕವಾಗಿದೆ. ಈ ದೃಷ್ಟಿಕೋನದಿಂದ ನೋಡಿದರೆ ರೋಹಿತ್ ಅವರ ಈ ಇನ್ನಿಂಗ್ಸ್ ಐತಿಹಾಸಿಕವಾಗಿದೆ. ಇದುವರೆಗೆ 8 ಐಸಿಸಿ ಟೂರ್ನಮೆಂಟ್‌ನ ಫೈನಲ್ ಪಂದ್ಯಗಳನ್ನ ಆಡಿರುವ ರೋಹಿತ್ಗೆ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ.
ರೋಹಿತ್ ಶರ್ಮಾ ಐಸಿಸಿ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರತಿಯೊಂದು ಪ್ರಮುಖ ಐಸಿಸಿ ಟೂರ್ನಮೆಂಟ್‌ಗಳಲ್ಲಿ ರೋಹಿತ್ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಆದರೆ ತಂಡಕ್ಕೆ ವೇಗದ ಆರಂಭ ನೀಡಿದ ನಂತರ, ವೇಗವಾಗಿ ರನ್ ಗಳಿಸುವ ಪ್ರಯತ್ನದಲ್ಲಿ, ಅವರು ಫೈನಲ್ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶವನ್ನು ಹೆಚ್ಚಾಗಿ ಕಳೆದುಕೊಳ್ಳುತ್ತಿದ್ದರು. 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲೂ ರೋಹಿತ್ ಅದೇ ತಪ್ಪನ್ನು ಮಾಡಿದ್ದರು. ಆದರೆ ದುಬೈನಲ್ಲಿ ಇಂದು ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದರು.
ಈ ಪಂದ್ಯದಲ್ಲೂ ರೋಹಿತ್ ಆಕ್ರಮಣಕಾರಿಯಾಗಿ ಆರಂಭಿಸಿದರಾದರೂ ವಿಕೆಟ್ ಕಳೆದುಕೊಳ್ಳಲಿಲ್ಲ. ಶುಭ್ಮನ್ ಗಿಲ್ ಜೊತೆ ಮೊದಲ 10 ಓವರ್‌ಗಳಲ್ಲಿ 64 ರನ್ ಗಳಿಸಿದ ನಂತರ, ರೋಹಿತ್ ಎಚ್ಚರಿಕೆಯಿಂದ ಆಡಲು ಪ್ರಾರಂಭಿಸಿದರು. ವಾಸ್ತವವಾಗಿ ಈ ಫೈನಲ್‌ಗೂ ಮುನ್ನ ಆಡಿದ್ದ 4 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕೇವಲ 26 ಸರಾಸರಿಯಲ್ಲಿ 104 ರನ್ ಗಳಿಸಿದ್ದರು. ಆದರೆ ಈ ಬಾರಿ ಅವರು ಫೈನಲ್‌ನಲ್ಲಿ 76 ರನ್‌ಗಳ ಕಾಣಿಕೆ ನೀಡಿ ವಿಕೆಟ್ ಒಪ್ಪಿಸಿದರು.
ರೋಹಿತ್ ಶರ್ಮಾ 2007 ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಐಸಿಸಿ ಫೈನಲ್ ಆಡಿದ್ದರು. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅವರು 16 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಇದಾದ ನಂತರ, 2013 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 14 ಎಸೆತಗಳಲ್ಲಿ 9 ರನ್ ಗಳಿಸಿದ್ದರು. 2014 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ 26 ಎಸೆತಗಳಲ್ಲಿ 29 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 2013 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ರೋಹಿತ್ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: IND vs NZ: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಬರೆದ ರೋಹಿತ್- ಕೊಹ್ಲಿ
ಇದಾದ ನಂತರ, ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡು ಫೈನಲ್‌ಗಳನ್ನು ಆಡಿದರು. 2021 ರ ಡಬ್ಲ್ಯೂಟಿಸಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 34 ಮತ್ತು 30 ರನ್‌ಗಳ ಇನ್ನಿಂಗ್ಸ್ ಆಡಿದ್ದ ರೋಹಿತ್ 2023 ರ ಡಬ್ಲ್ಯೂಟಿಸಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 15 ಮತ್ತು 43 ರನ್ ಗಳಿಸಿದ್ದರು. 2023 ರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ನಲ್ಲಿ 31 ಎಸೆತಗಳಲ್ಲಿ 47 ರನ್ ಗಳಿಸಿ ಔಟಾಗಿದ್ದರು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧದ 2024 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ಗೆ 5 ಎಸೆತಗಳಲ್ಲಿ ಕೇವಲ 9 ರನ್ ಗಳಿಸಲು ಸಾಧ್ಯವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Sun, 9 March 25