ಆ್ಯಶಸ್ ಸರಣಿಯ (The Ashes) ನಾಲ್ಕನೇ ಪಂದ್ಯವು ಹಲವಾರು ಕಾರಣದಿಂದ ಸುದ್ದಿಯಲ್ಲಿದೆ. ಈಗಾಗಲೇ 3-0 ಅಂತರದಿಂದ ಇಂಗ್ಲೆಂಡ್ (Australia vs England) ಸರಣಿ ಕೈಚೆಲ್ಲಿಕೊಂಡಿದ್ದು, ಇದಾಗ್ಯೂ ಆಸ್ಟ್ರೇಲಿಯಾ ವಿರುದ್ದದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಮಾನ ಉಳಿಸಿಕೊಳ್ಳುವ ತವಕದಲ್ಲಿದೆ. ಆದರೆ ಅತ್ತ ಆಸೀಸ್ ಪರ ನಾಲ್ಕನೇ ಪಂದ್ಯದಲ್ಲಿ ಸ್ಥಾನ ಪಡೆದ ಉಸ್ಮಾನ್ ಖ್ವಾಜಾ (Usman Khwaja) ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ 4ನೇ ಟೆಸ್ಟ್ ಪಂದ್ಯವನ್ನು ಆಸೀಸ್ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ಆಟಗಾರ ಕೂಡ ಈ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಈತ ಪ್ಲೇಯಿಂಗ್ ಇಲೆವೆನ್ನ ಭಾಗವಲ್ಲ ಎಂಬುದು ವಿಶೇಷ.
ಇಂಗ್ಲೆಂಡ್ ತಂಡವು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ವಿಕೆಟ್-ಕೀಪರ್ಗಳೊಂದಿಗೆ ಕಣಕ್ಕಿಳಿದಿತ್ತು. ಅದರಂತೆ ಪ್ಲೇಯಿಂಗ್ ಇಲೆವೆನ್ನಲ್ಲಿ ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೋವ್ ಕಾಣಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯದ ಎರಡನೇ ಇನ್ನಿಂಗ್ಸ್ ಆರಂಭವಾಗುವ ಹೊತ್ತಿಗೆ ಬಟ್ಲರ್ ಮತ್ತು ಬೈರ್‌ಸ್ಟೋವ್ ಇಬ್ಬರೂ ತಮ್ಮ ಬೆರಳುಗಳಿಗೆ ಗಾಯ ಮಾಡಿಕೊಂಡು ಮೈದಾನದಿಂದ ಹೊರಗುಳಿದಿದ್ದರು. ಬಟ್ಲರ್ ಕೀಪಿಂಗ್ ಮಾಡುತ್ತಿದ್ದಾಗ ಬೇರ್‌ಸ್ಟೋವ್ ಗಾಯಗೊಂಡರು. ಇದರಿಂದಾಗಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದ ಒಲಿ ಪೋಪ್ (Ollie Pope) ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಲಾಗಿತ್ತು.
ಮೂರನೇ ಇನ್ನಿಂಗ್ಸ್‌ನಲ್ಲಿ ಬದಲಿ ವಿಕೆಟ್ ಕೀಪರ್ ಆಗಿ ಇಳಿದ ಒಲಿ ಪೋಪ್ ವಿಕೆಟ್ ಹಿಂದೆ ಅತ್ಯುತ್ತಮ ಪ್ರದರ್ಶನ ನೀಡಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಪೋಪ್ ಆಸ್ಟ್ರೇಲಿಯಾದ ನಾಲ್ವರು ಬ್ಯಾಟರ್ಗಳ ಕ್ಯಾಚ್ ಹಿಡಿಯುವ ಮೂಲಕ ಪೆವಿಲಿಯನ್‌ಗೆ ಮರಳುವಂತೆ ಮಾಡಿದರು. ಇದರೊಂದಿಗೆ ಆ್ಯಶಸ್ ಸರಣಿಯಲ್ಲಿ ಹಾಗೂ ವಿಶ್ವ ಕ್ರಿಕೆಟ್ನಲ್ಲಿ ಒಲಿ ಪೋಪ್ ಹೆಸರಿನಲ್ಲಿ ದಾಖಲೆಯೊಂದು ಸೇರ್ಪಡೆಯಾಯಿತು.
ಹೌದು, ಆ್ಯಶಸ್ ಸರಣಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ಅತೀ ಹೆಚ್ಚು ಕ್ಯಾಚ್ ಹಿಡಿದ ಹಾಗೂ ಬದಲಿ ವಿಕೆಟ್ ಕೀಪರ್ ಆಗಿ ಅತ್ಯಧಿಕ ಕ್ಯಾಚ್ ಪಡೆದ ಆಟಗಾರ ಎಂಬ ದಾಖಲೆ ಒಲಿ ಪೋಪ್ ಪಾಲಾಯಿತು. ಇನ್ನು 142 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಬದಲಿ ಫೀಲ್ಡರ್ ಇನ್ನಿಂಗ್ಸ್‌ನಲ್ಲಿ 4 ಕ್ಯಾಚ್‌ಗಳನ್ನು ತೆಗೆದುಕೊಂಡಿರುವುದು ಇದು ಮೂರನೇ ಬಾರಿ.
ಈ ಹಿಂದೆ ಈ ಸಾಧನೆ ಮಾಡಿದ್ದು ಪಾಕಿಸ್ತಾನದ ಯೂನಿಸ್ ಖಾನ್. 2001ರಲ್ಲಿ ಬಾಂಗ್ಲಾದೇಶ ವಿರುದ್ಧ ಯೂನಿಸ್ ಈ ದಾಖಲೆ ಮಾಡಿದ್ದರು. ಆ ಬಳಿಕ ಭಾರತದ ವೃದ್ಧಿಮಾನ್ ಸಹಾ 2021 ರಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು 4 ಕ್ಯಾಚ್‌ಗಳನ್ನು ತೆಗೆದುಕೊಳ್ಳುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದರು. ಇದೀಗ ಒಂದು ವರ್ಷದೊಳಗೆ ಒಲಿ ಪೋಪ್ ಸಹಾ ಅವರ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ, ಯೂನಿಸ್ ಖಾನ್, ವೃದ್ಧಿಮಾನ್ ಸಹಾ ಮತ್ತು ಒಲಿ ಪೋಪ್ ಮೂವರು ಆಟಗಾರರು ಕೂಡ ಪಂದ್ಯದ ಮೂರನೇ ಇನ್ನಿಂಗ್ಸ್‌ನಲ್ಲಿ ಬದಲಿ ಆಟಗಾರರಾಗಿ ಕಣಕ್ಕಿಳಿದು 4 ಕ್ಯಾಚ್‌ಗಳನ್ನು ಪಡೆದು ವಿಶ್ವದಾಖಲೆ ಮಾಡಿರುವುದು ವಿಶೇಷ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Ollie Pope world record to take Most Catches by a Substitute)