PAK vs AUS: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ! ದಾಳಿ ನಡೆಯುವ ಸಂಭವ; ಏಕದಿನ ಸರಣಿ ಸ್ಥಳಾಂತರ
PAK vs AUS: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಮುಂದಿನ ವಾರ ಮತದಾನ ನಡೆಯಲಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಂತರ, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಆದರೆ, ಮಾರ್ಚ್ ಅಂತ್ಯದಲ್ಲಿ ನಡೆಯಲಿರುವ ಈ ಸರಣಿಯ ಮೇಲೆ ಪಾಕಿಸ್ತಾನದ ರಾಜಕೀಯ ಅರಾಜಕತೆ ಪ್ರಭಾವ ಬೀರಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದೇಶದಲ್ಲಿ ಎದ್ದಿರುವ ಬಿರುಗಾಳಿಗೆ ಕ್ರಿಕೆಟ್ ಬಲಿಯಾಗಿದೆ. ಹೀಗಾಗಿ ಪಾಕಿಸ್ತಾನ-ಆಸ್ಟ್ರೇಲಿಯಾ ODI ಸರಣಿಯ (Pak vs Aus ODI Series venue changed) ಭದ್ರತೆಗೆ ಭಂಗ ಎದುರಾಗಿದೆ. ಇದನ್ನು ತಪ್ಪಿಸಲು, ಸರಣಿ ನಡೆಸಲು ನಿಗದಿಯಾಗಿದ್ದ ಸ್ಥಳವನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಮಾರ್ಚ್ 29 ರಿಂದ ಪ್ರಾರಂಭವಾಗುವ ಈ ಸರಣಿಯನ್ನು ಈಗ ರಾವಲ್ಪಿಂಡಿ ಬದಲಿಗೆ ಲಾಹೋರ್‌ನಲ್ಲಿ ಆಯೋಜಿಸಲಾಗುತ್ತದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಮುಂದಿನ ವಾರ ಮತದಾನ ನಡೆಯಲಿದೆ. ಇಮ್ರಾನ್ ಖಾನ್ ಅವರ ಆಡಳಿತ ಪಕ್ಷ ಪಿಟಿಐ ಮಾರ್ಚ್ 27 ರಂದು ಇಸ್ಲಾಮಾಬಾದ್‌ನಲ್ಲಿ ದೊಡ್ಡ ರ್ಯಾಲಿಯನ್ನು ನಡೆಸಲಿದ್ದು, ಲಕ್ಷಗಟ್ಟಲೆ ಇಮ್ರಾನ್ ಬೆಂಬಲಿಗರು ಪಾಲ್ಗೋಳ್ಳುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಅದಕ್ಕೂ ಮುನ್ನ ಮಾರ್ಚ್ 23 ರಂದು, ವಿರೋಧ ಪಕ್ಷಗಳು ರಾವಲ್ಪಿಂಡಿಯಿಂದ ಇಸ್ಲಾಮಾಬಾದ್‌ಗೆ ಮೆರವಣಿಗೆಯನ್ನು ಆಯೋಜಿಸುತ್ತಿವೆ.
ಸರಣಿ ಸ್ಥಳಾಂತರಿಸಲು ಕಾರಣವಿದು ಅಂತಹ ಪರಿಸ್ಥಿತಿಯಲ್ಲಿ, ದೇಶದಲ್ಲಿ ರಾಜಕೀಯ ಅಸ್ಥಿರತೆಯ ಪರಿಸ್ಥಿತಿಯಿಂದಾಗಿ, ಐತಿಹಾಸಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇದರಿಂದಾಗಿ ಏಕದಿನ ಸರಣಿಯ ಸ್ಥಳವನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ESPN-Cricinfo ವರದಿಯ ಪ್ರಕಾರ, ಪಾಕಿಸ್ತಾನದ ಗೃಹ ಸಚಿವರು ಮಾರ್ಚ್ 18 ಶುಕ್ರವಾರದಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ರ್ಯಾಲಿ ನಡೆದರೂ, ರಾವಲ್ಪಿಂಡಿ ಇಸ್ಲಾಮಾಬಾದ್‌ಗೆ ಹೊಂದಿಕೊಂಡಿರುವ ನಗರವಾಗಿದ್ದು, ಭದ್ರತಾ ಬೆದರಿಕೆ ಇದೆ. ಅಲ್ಲದೆ ಇಸ್ಲಾಮಾಬಾದ್‌ನಲ್ಲಿ ಮಾರ್ಚ್ 27 ರ ಇಮ್ರಾನ್ ಬೆಂಬಲಿಗರ ರ್ಯಾಲಿ ನಡೆಯಲಿರುವ ಸ್ಥಳವು ರಾವಲ್ಪಿಂಡಿಯ ಎರಡೂ ತಂಡಗಳ ಹೋಟೆಲ್‌ಗಳಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಹೀಗಾಘಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾರ್ಚ್ 29 ರಿಂದ ಏಕದಿನ ಸರಣಿ 24 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡ ಸದ್ಯ ಎರಡು ಟೆಸ್ಟ್ ಪಂದ್ಯಗಳನ್ನಾಡಿದೆ. ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿಯೇ ನಡೆದಿದ್ದು, ನಂತರ ಎರಡೂ ತಂಡಗಳು ಕರಾಚಿಯಲ್ಲಿ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳು ಡ್ರಾ ಆಗಿವೆ. ಇದೀಗ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ಮಾರ್ಚ್ 21 ರಿಂದ ಲಾಹೋರ್‌ನಲ್ಲಿ ನಡೆಯಲಿದೆ. ನಂತರ ಏಕದಿನ ಸರಣಿಯ ಪಂದ್ಯಗಳು ಮಾರ್ಚ್ 29, ಮಾರ್ಚ್ 31 ಮತ್ತು ಏಪ್ರಿಲ್ 2 ರಂದು ನಡೆಯಲಿದೆ. ಬಳಿಕ ಏಕೈಕ ಟಿ20 ಪಂದ್ಯ ಏಪ್ರಿಲ್ 5 ರಂದು ಲಾಹೋರ್‌ನಲ್ಲಿ ನಡೆಯಲಿದೆ. ಪ್ರಸ್ತುತ, ODI ಸರಣಿಯ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ಇದರ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.
ಇದನ್ನೂ ಓದಿ:IPL 2022: ಹೋಳಿ ಹಬ್ಬದಂದು ಫ್ರಾಂಚೈಸಿಗಳಿಗೆ ಸಿಹಿ ಸುದ್ದಿ! ತಂಡದಿಂದ 6 ಆಟಗಾರರನ್ನು ಕೈಬಿಟ್ಟ ಆಫ್ರಿಕಾ