ನೋ ಬಾಲ್​ನಲ್ಲೇ ‘ಶತಕ’ ಪೂರೈಸಿದ ಪಾಕಿಸ್ತಾನ್!

ಪಾಕಿಸ್ತಾನದ ಬ್ಯಾಟರ್‌ಗಳಿಗೆ ಮೈದಾನದಲ್ಲಿ ಶತಕ ಬಾರಿಸಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ... ಆದರೆ ಬೌಲರ್‌ಗಳು ಮಾತ್ರ 'ನೋ ಬಾಲ್' ಎಸೆಯುವುದರಲ್ಲೇ ಭರ್ಜರಿ ಶತಕ ಬಾರಿಸಿ ತಂಡದ ಮಾನ ಕಳೆದಿದ್ದಾರೆ! 2026ರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕ್ ಬೌಲರ್‌ಗಳು ಎದುರಾಳಿಗಳಿಗೆ ಫ್ರೀ ರನ್ ನೀಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಂತಿದೆ. ಪರಿಣಾಮ ಹೆಚ್ಚುವರಿ 18 ಓವರ್​ಗಳನ್ನು ಎಸೆದಿದ್ದಾರೆ.

ನೋ ಬಾಲ್​ನಲ್ಲೇ ಶತಕ ಪೂರೈಸಿದ ಪಾಕಿಸ್ತಾನ್!
Pakistan
Image Credit source: GettyImages

Updated on: Nov 20, 2026 | 1:30 PM

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಸೆಂಚುರಿ ಬಾರಿಸುವುದನ್ನು ನೋಡಿರುತ್ತೀರಿ… ಆದ್ರೆ ಬೌಲರ್‌ಗಳು ನೋ ಬಾಲ್ ಎಸೆಯೋದ್ರಲ್ಲೇ ಸೆಂಚುರಿ ಪೂರೈಸಿರೋದನ್ನ ಎಲ್ಲಾದ್ರೂ ನೋಡಿದ್ದೀರಾ? ಹೌದು, 2026ರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ್ ತಂಡ ಬರೋಬ್ಬರಿ 109 ನೋಬಾಲ್‌ಗಳನ್ನು ಎಸೆದು ಹೊಸ ಅನಗತ್ಯ ದಾಖಲೆ ಬರೆದಿದೆ.

2026ರಲ್ಲಿ ಇದುವರೆಗೆ ಆಡಿದ 9 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನದ ಬೌಲರ್‌ಗಳು ಬರೋಬ್ಬರಿ 109 ನೋಬಾಲ್‌ಗಳನ್ನು ಎಸೆದಿದ್ದಾರೆ. ಇದು ಸುಮಾರು 18 ಹೆಚ್ಚುವರಿ ಓವರ್‌ಗಳಿಗೆ ಸಮಾನವಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲೇ ಪಾಕ್ ಬೌಲರ್‌ಗಳು ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಎಸೆದ ನೋ ಬಾಲ್​ಗಳ ಸಂಖ್ಯೆ ಬರೋಬ್ಬರಿ 28 !

Loading...
  • ಪಾಕಿಸ್ತಾನ್ ತಂಡದ ಯುವ ವೇಗಿ ರೆಝಾವುಲ್ಲಾ  ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 14 ನೋ ಬಾಲ್​ಗಳನ್ನು ಎಸೆದಿದ್ದಾರೆ.  ಇನ್ನು ವರ್ಷದ ಆರಂಭದಿಂದ ವೇಗಿ ಖುರ್ರಂ ಶೆಹಝಾದ್ ಕೂಡ ಅತಿ ಹೆಚ್ಚು ನೋಬಾಲ್ ಎಸೆದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಾಂಗ್ಲಾದೇಶ್ ಅರ್ಧಶತಕ:

ಪಾಕಿಸ್ತಾನ್ ನೋ ಬಾಲ್​ನಲ್ಲಿ ಶತಕ ಪೂರೈಸಿದರೆ, ಬಾಂಗ್ಲಾದೇಶ್ ಅರ್ಧಶತಕದ ಗಡಿದಾಟಿದ್ದಾರೆ. 2026ರಲ್ಲಿ ಬಾಂಗ್ಲಾದೇಶ್ 54 ನೋ ಬಾಲ್ ಎಸೆಯತುವ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಭಾರತ ತಂಡದ ಸ್ಥಿತಿಗತಿ ಹೇಗಿದೆ?

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ತಂಡದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. 2026ರಲ್ಲಿ ಭಾರತದ ಬೌಲರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಎಸೆದಿರುವುದು ಕೇವಲ 30 ನೋಬಾಲ್‌ಗಳನ್ನು ಮಾತ್ರ.

  • ಶ್ರೀಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ 20 ನೋ ಬಾಲ್‌ಗಳು.
  •  ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನ 6 ನೋ ಬಾಲ್‌ಗಳು.
  • ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ 4 ನೋ ಬಾಲ್‌ಗಳು.

ಟೀಮ್ ಇಂಡಿಯಾ ಸ್ಪಿನ್ನರ್‌ಗಳು ನೋಬಾಲ್ ಎಸೆಯುವುದು ತೀರಾ ಅಪರೂಪ. ಆದರೆ ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ 2026ರ ಶ್ರೀಲಂಕಾ ಪ್ರವಾಸದ ಎರಡು ಟೆಸ್ಟ್‌ಗಳಲ್ಲಿ 9 ನೋಬಾಲ್‌ಗಳನ್ನು ಎಸೆಯುವ ಮೂಲಕ ಅಚ್ಚರಿ ಮೂಡಿಸಿದ್ದರು.

ಸಾರ್ವಕಾಲಿಕ ದಾಖಲೆ ಯಾವುದು?

2026ರಲ್ಲಿ ಪಾಕಿಸ್ತಾನ್ ಅಗ್ರಸ್ಥಾನದಲ್ಲಿದ್ದರೂ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ನೋ ಬಾಲ್ ಎಸೆದ ಸಾರ್ವಕಾಲಿಕ ವಿಶ್ವದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. 1991ರಲ್ಲಿ ವೆಸ್ಟ್ ಇಂಡೀಸ್‌ನ ವೇಗಿಗಳು ಒಂದೇ ವರ್ಷದಲ್ಲಿ ಬರೋಬ್ಬರಿ 293 ನೋಬಾಲ್‌ಗಳನ್ನು ಎಸೆದಿದ್ದರು ಎಂದರೆ ನಂಬಲೇಬೇಕು.

ಇದನ್ನೂ ಓದಿ: IPL 2027 ಟ್ರೇಡ್ ವಿಂಡೋ ಓಪನ್: ಹೀಗಿವೆ ಹೊಸ ನಿಯಮಗಳು

ಒಟ್ಟಾರೆಯಾಗಿ, 2026ರಲ್ಲಿ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗದ ಅಶಿಸ್ತು ಎದ್ದು ಕಾಣುತ್ತಿದೆ. ಬರೋಬ್ಬರಿ 109 ನೋಬಾಲ್‌ಗಳು ಎಂದರೆ, ಎದುರಾಳಿಗಳಿಗೆ ಸುಮಾರು 18 ಹೆಚ್ಚುವರಿ ಓವರ್‌ಗಳನ್ನು ಉಡುಗೊರೆಯಾಗಿ ನೀಡಿದಂತೆ. ಹೀಗಾಗಿಯೇ ಪಾಕ್ ಬೌಲರ್‌ಗಳ ಈ ಕಳಪೆ ಪ್ರದರ್ಶನವು ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us