
T20 World Cup 2026: ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ. ಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಈ ಪಂದ್ಯವು ಪಾಕಿಸ್ತಾನ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಪಾಕ್ ತಂಡ ಸೆಮಿಫೈನಲ್ಗೇರಲಿದೆ.
ಇಲ್ಲಿ ಅಮೋಘ ಗೆಲುವಂದರೆ ಶ್ರೀಲಂಕಾ ವಿರುದ್ಧ ಕನಿಷ್ಠ 64 ರನ್ಗಳ ಜಯ ಸಾಧಿಸಲೇಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ ಕನಿಷ್ಠ 40 ಎಸೆತಗಳು ಬಾಕಿಯಿರುವಂತೆ ಪಂದ್ಯ ಮುಗಿಸಬೇಕು. ಅಂದರೆ 13 ಓವರ್ಗಳಲ್ಲಿ ಚೇಸ್ ಮಾಡುವುದು ಪಾಕಿಸ್ತಾನ್ ಪಾಲಿಗೆ ಅನಿವಾರ್ಯ.
ಒಂದು ವೇಳೆ ಶ್ರೀಲಂಕಾ ತಂಡವು 201 ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು ಈ ಗುರಿಯನ್ನು ಕೇವಲ 13.5 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 151 ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು ಕೇವಲ 12.4 ಓವರ್ಗಳಲ್ಲಿ ಪಂದ್ಯ ಮುಗಿಸಬೇಕು.
ಆದರೆ ಇಂತಹದೊಂದು ಚೇಸಿಂಗ್ ಪಾಕಿಸ್ತಾನ್ ತಂಡಕ್ಕೆ ಕಷ್ಟಸಾಧ್ಯ ಎಂದೇ ಹೇಳಬಹುದು. ಏಕೆಂದರೆ ಈ ಬಾರಿಯ ವಿಶ್ವಕಪ್ನಲ್ಲಿ 5 ಪಂದ್ಯಗಳನ್ನಾಡಿರುವ ಪಾಕ್ ತಂಡವು ಒಮ್ಮೆಯೂ 10ರ ಸರಾಸರಿಯಲ್ಲಿ ರನ್ ಗಳಿಸಿಲ್ಲ ಎಂಬುದು ಉಲ್ಲೇಖಾರ್ಹ.
ಅಂದರೆ ಕಳೆದ ಐದು ಮ್ಯಾಚ್ಗಳಲ್ಲಿ ಪಾಕಿಸ್ತಾನ್ ತಂಡವು 10ರ ಸರಾಸರಿಯಲ್ಲಿ ರನ್ ಗಳಿಸಿಯೇ ಇಲ್ಲ. ಹೀಗಾಗಿಯೇ ಒಮ್ಮೆಯೂ 200 ರನ್ಗಳ ಗಡಿದಾಟಲು ಸಾಧ್ಯವಾಗಿಲ್ಲ.
ಇದೀಗ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡ 200 ರನ್ಗಳಿಸಿದರೆ, ಪಾಕಿಸ್ತಾನ್ ತಂಡವು 13.5 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಅಂದರೆ ಪ್ರತಿ ಓವರ್ಗೆ 14 ರ ಸರಾಸರಿಯಲ್ಲಿ ರನ್ಗಳಿಸಲೇಬೇಕು.
ಒಂದು ವೇಳೆ ಶ್ರೀಲಂಕಾ 181 ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ ಪ್ರತಿ ಓವರ್ಗೆ 13.50 ಸರಾಸರಿಯಲ್ಲಿ ರನ್ಗಳಿಸಿ 13.4 ಓವರ್ಗಳಲ್ಲಿ ಪಂದ್ಯ ಮುಗಿಸಬೇಕಾಗುತ್ತದೆ.
ಶ್ರೀಲಂಕಾ ತಂಡವು 150 ರನ್ಗಳಿಸಿದರೆ, ಪಾಕಿಸ್ತಾನ್ ತಂಡವು 12.4 ಓವರ್ಗಳಲ್ಲಿ 151 ರನ್ಗಳಿಸಲೇಬೇಕು. ಅಂದರೆ ಪ್ರತಿ ಓವರ್ಗಳಲ್ಲಿ 12 ರ ಸರಾಸರಿಯಲ್ಲಿ ರನ್ ಕಲೆಹಾಕಲೇಬೇಕು.
ಆದರೆ ನೆದರ್ಲೆಂಡ್ಸ್, ಯುಎಸ್ಎ, ನಮೀಬಿಯ ವಿರುದ್ಧದವೇ ಪಾಕಿಸ್ತಾನ್ ತಂಡಕ್ಕೆ ಪ್ರತಿ ಓವರ್ಗೆ 10ರ ಸರಾಸರಿಯಲ್ಲಿ ರನ್ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಶ್ರೀಲಂಕಾ ವಿರುದ್ಧ ಕಠಿಣ ಗುರಿಯನ್ನು 13 ಓವರ್ಗಳಲ್ಲಿ ಬೆನ್ನತ್ತುವುದು ಪಾಕ್ ಪಾಲಿಗೆ ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಇದಾಗ್ಯೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕ್ ಬ್ಯಾಟರ್ಗಳು ಅಬ್ಬರಿಸಿದರೆ ಮಾತ್ರ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಸೆಮಿಫೈನಲ್ಗೇರಬಹುದು.
ಇದನ್ನೂ ಓದಿ: ಒಳ್ಳೆ ಸ್ಪಿನ್ನರ್ನಂತೆ ಬೌಲಿಂಗ್ ಮಾಡ್ತಿದ್ದೀಯ… ಆಟಗಾರರ ನಡುವೆ ಮಾತಿನ ಚಕಮಕಿ