
ಭಾರತ ಮತ್ತು ಪಾಕಿಸ್ತಾನ (India vs Pakistan) ಇದೇ ಶನಿವಾರ, ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಸ್ಪರ್ಧಿಸಲಿವೆ. ಏಷ್ಯಾಕಪ್ (Asia Cup 2023) ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದು ಮೊದಲ ಪಂದ್ಯವಾಗಿದ್ದು, ನೇಪಾಳವನ್ನು ಸೋಲಿಸಿದ ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ರೋಹಿತ್ (Rohit Sharma) ಪಡೆಯನ್ನು ಎದುರಿಸಲು ಸಜ್ಜಾಗಿದೆ. ಈಗಾಗಲೇ ಗೆಲುವಿನ ಶುಭಾರಂಭ ಮಾಡಿರುವ ಪಾಕಿಸ್ತಾನ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ನೋಡುತ್ತಿದ್ದರೆ, ಇತ್ತ ರೋಹಿತ್ ಪಡೆ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಲು ಪ್ರಯತ್ನಿಸಲಿದೆ. ಇನ್ನು ಈ ಪಂದ್ಯವನ್ನು ಟೀಂ ಇಂಡಿಯಾ (Team India) ಗೆಲ್ಲಬೇಕಾದರೆ ತಂಡದ ಅಗ್ರ ಕ್ರಮಾಂಕ,ವಿಶೇಷವಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಹಾಬ್ ರಿಯಾಜ್ (Wahab Riaz) ಕೂಡ ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ರೋಹಿತ್ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿರುವ ರಿಯಾಜ್, ರೋಹಿತ್ ಅವರನ್ನು ಬೇಗ ಔಟ್ ಮಾಡದಿದ್ದರೆ ಆತ ಪಾಕಿಸ್ತಾನವನ್ನು ಮುಗಿಸಿ ಬಿಡುತ್ತಾನೆ ಎಂದಿದ್ದಾರೆ.
ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಈ ಭಾರತ-ಪಾಕಿಸ್ತಾನ ಪಂದ್ಯದಲ್ಲೂ ಕಳೆದ ಕೆಲವು ಪಂದ್ಯಗಳಂತೆ ಮತ್ತೊಮ್ಮೆ ಪಾಕಿಸ್ತಾನದ ವೇಗದ ಬೌಲಿಂಗ್ ಮತ್ತು ಭಾರತದ ಅಗ್ರ ಕ್ರಮಾಂಕದ ನಡುವಿನ ಪೈಪೋಟಿಯತ್ತ ಕಣ್ಣು ಹಾಯಿಸಲಿದೆ. ವಿಶೇಷವಾಗಿ ಎಡಗೈ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಮತ್ತು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಡುವಿನ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದರೆ ಇತ್ತ ಶಾಹೀನ್ ಅಫ್ರಿದಿ ಪಾಕ್ ಪರ ಮೊದಲ ಓವರ್ ಬೌಲ್ ಮಾಡುತ್ತಾರೆ. ಅದರಲ್ಲೂ ಶಾಹೀನ್ ಮೊದಲ ಓವರ್‌ನಲ್ಲಿಯೇ ವಿಕೆಟ್ ಪಡೆಯುವಲ್ಲಿ ನಿಸ್ಸೀಮರು.
ಪಾಕ್ ಎದುರು ಭಾರತ ಮೊದಲು ಬ್ಯಾಟ್ ಮಾಡಬೇಕೇ ಅಥವಾ ಬೌಲಿಂಗ್ ಮಾಡಬೇಕೇ? ಇಲ್ಲಿದೆ ಕ್ಯಾಂಡಿ ಪಿಚ್ ವರದಿ
ಇದರ ಹೊರತಾಗಿಯೂ, ಈ ಬಾರಿ ಪರಿಸ್ಥಿತಿ ಅಷ್ಟು ಸುಲಭವಲ್ಲ ಎಂದು ಪಾಕಿಸ್ತಾನದ ಮಾಜಿ ಅನುಭವಿ ವೇಗದ ಬೌಲರ್ ವಹಾಬ್ ರಿಯಾಜ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹೈವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ರಿಯಾಜ್, ಇದು ಏಕದಿನ ಪಂದ್ಯವಾಗಿರುವುದರಿಂದ ಆರಂಭದಲ್ಲಿ ರೋಹಿತ್, ಶಾಹೀನ್ ಶಾ ಅಫ್ರಿದಿ ವಿರುದ್ಧ ಎಚ್ಚರಿಕೆಯಿಂದ ಆಡಬಹುದು. ಟಿ20 ಗಿಂತ ಭಿನ್ನವಾಗಿ, ಏಕದಿನದಲ್ಲಿ ಮೊದಲ ಓವರ್‌ನಿಂದ ತ್ವರಿತ ರನ್ ಗಳಿಸುವ ಅಗತ್ಯವಿಲ್ಲ. ಆದ್ದರಿಂದ ಭಾರತೀಯ ಆರಂಭಿಕರು ಎಚ್ಚರಿಕೆಯಿಂದ ಆಡುವ ಕಡೆ ಗಮನಹರಿಸಲಿದ್ದಾರೆ. ಇದು ಅವರಿಗೆ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ.
ಇಷ್ಟೇ ಅಲ್ಲ, ರೋಹಿತ್ ಶರ್ಮಾ ರೂಪದಲ್ಲಿ ಪಾಕಿಸ್ತಾನ ತಂಡಕ್ಕೆ ವಹಾಬ್ ದೊಡ್ಡ ಎಚ್ಚರಿಕೆ ನೀಡಿದರು. ಹೊಸ ಚೆಂಡಿನೊಂದಿಗೆ ಆರಂಭಿಕ ಓವರ್‌ಗಳಲ್ಲಿ ರೋಹಿತ್ ಶರ್ಮಾ ಔಟಾಗದಿದ್ದರೆ, ಪಾಕಿಸ್ತಾನಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ವಹಾಬ್, ಬಾಬರ್ ಆಝಂ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ರೋಹಿತ್‌ಗೆ ವಿಶೇಷ ಏನನ್ನೂ ಮಾಡಲು ಸಾಧ್ಯವಾಗದಿದ್ದರೂ, ಏಕದಿನ ಮಾದರಿಯಲ್ಲಿ ಭಾರತೀಯ ನಾಯಕ ಯಾವಾಗಲೂ ಪಾಕ್ ವಿರುದ್ಧ ರನ್ ಗಳಿಸಿದ್ದಾರೆ ಎಂದು ವಹಾಬ್ ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ರೋಹಿತ್ ಪಾಕಿಸ್ತಾನ ವಿರುದ್ಧದ ಸತತ ಎರಡು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಇದರಲ್ಲಿ 2018 ರ ಏಷ್ಯಾಕಪ್‌ನಲ್ಲಿ 111 ರನ್ಗಳ ಇನ್ನಿಂಗ್ಸ್ ಆಡಿದ್ದ ಹಿಟ್ಮ್ಯಾನ್ ಒಂದು ವರ್ಷದ ನಂತರ, 2019 ರ ವಿಶ್ವಕಪ್‌ನಲ್ಲಿ ಅದ್ಭುತ 140 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿತ್ತು. ಒಟ್ಟಾರೆಯಾಗಿ, ರೋಹಿತ್ ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳಲ್ಲಿ 51 ರ ಸರಾಸರಿಯಲ್ಲಿ 720 ರನ್ ಬಾರಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Fri, 1 September 23