
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಪ್ಲೇಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಮೌಂಗ್ ಕಾಕ್‌ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡದ ನಾಯಕ ಅಮೀರ್ ಖಲೀಮ್ ಬೌಲಿಂಗ್ ಆಯ್ದುಕೊಂಡಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡಕ್ಕೆ ನಾಯಕ ಅಬ್ಬಾಸ್ ಅಫ್ರಿದಿ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಹೊಡಿಬಡಿ ಆಟವಾಡಿದ ಅಫ್ರಿದಿ 16 ಎಸೆತಗಳಲ್ಲಿ ಚಚ್ಚಿದ್ದು ಬರೋಬ್ಬರಿ 73 ರನ್ಗಳು. ಈ 73 ರನ್ಗಳಲ್ಲಿ 11 ಸಿಕ್ಸ್ ಹಾಗೂ 1 ಫೋರ್ ಒಳಗೊಂಡಿತ್ತು.
ಅಬ್ಬಾಸ್ ಅಫ್ರಿದಿಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಸಮದ್ ಕೇವಲ 7 ಎಸೆತಗಳಲ್ಲಿ 32 ರನ್ (2 ಫೋರ್, 4 ಸಿಕ್ಸರ್) ಹಾಗೂ ಅಹ್ಮದ್ ದಾನಿಯಾಲ್ 5 ಎಸೆತಗಳಲ್ಲಿ 25 ರನ್ (4 ಸಿಕ್ಸರ್) ಬಾರಿಸಿ ಒಮಾನ್ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದರು. ಈ ಮೂಲಕ ಪಾಕಿಸ್ತಾನ್ ತಂಡ 6 ಓವರ್‌ಗಳಲ್ಲಿ ಬರೋಬ್ಬರಿ 154 ರನ್ ಕಲೆಹಾಕಿತು.
155 ರನ್‌ಗಳ ಅಸಾಧ್ಯ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಉಸ್ಮಾನ್ ಅಲಿ 17 ಎಸೆತಗಳಲ್ಲಿ 67 ರನ್ (4 ಫೋರ್, 8 ಸಿಕ್ಸರ್) ಮತ್ತು ಝೊಹೈಬ್ ಅಮಾನತ್ 18 ಎಸೆತಗಳಲ್ಲಿ 61 ರನ್ (3 ಫೋರ್, 8 ಸಿಕ್ಸರ್) ಚಚ್ಚುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದರು. ಆದರೆ, ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 136 ರನ್‌ಗಳಷ್ಟೇ ಗಳಿಸಲು ಶಕ್ತವಾಗಿ, 18 ರನ್‌ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಪ್ಲೇಟ್ ಫೈನಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಪಾಕಿಸ್ತಾನ್ ತಂಡ 6 ಓವರ್‌ಗಳಲ್ಲಿ 154 ರನ್ ಚಚ್ಚಿದರೂ ಇದು ವಿಶ್ವ ದಾಖಲೆಯಾಗಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲೇ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 6 ಓವರ್‌ಗಳಲ್ಲಿ ಬರೋಬ್ಬರಿ 159 ರನ್ ಸಿಡಿಸಿತ್ತು. ಈ ಮೂಲಕ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಸರ್ವಕಾಲಿಕ ದಾಖಲೆಯನ್ನು ಆಸ್ಟ್ರೇಲಿಯಾ ತನ್ನ ಹೆಸರಿಗೆ ಬರೆದುಕೊಂಡಿತ್ತು.
ಇದನ್ನೂ ಓದಿ: ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯ ಚೇಸಿಂಗ್
ಇದೀಗ ಪಾಕಿಸ್ತಾನ ತಂಡ ಒಮಾನ್ ವಿರುದ್ಧ ಈ ಬೃಹತ್ ದಾಖಲೆಯ ಸಮೀಪಕ್ಕೆ ತಲುಪಿದರೂ, ಕೇವಲ 6 ರನ್‌ಗಳ ಕೊರತೆಯಿಂದಾಗಿ ಹೊಸ ವಿಶ್ವ ದಾಖಲೆ ನಿರ್ಮಿಸುವ ಸುವರ್ಣ ಅವಕಾಶವನ್ನು ಕೈಚೆಲ್ಲಿಕೊಂಡಿದೆ.
Published On - 9:09 am, Mon, 2 November 26