7 ವರ್ಷಗಳಲ್ಲಿ ಪಾಕ್ ತಂಡದಲ್ಲಿ ಮಹತ್ವದ ಬದಲಾವಣೆ: ಟೀಮ್ ಇಂಡಿಯಾದಲ್ಲಿದ್ದಾರೆ ಪಂಚ ಪಾಂಡವರು..!
India vs Pakistan: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 14 ರಂದು ನಡೆಯಲಿದೆ.
ODI World Cup 2023: ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ತೆರಳಲು ಪಾಕಿಸ್ತಾನ್ (Pakistan) ತಂಡಕ್ಕೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ 7 ವರ್ಷಗಳ ಬಳಿಕ ಪಾಕ್ ಪಡೆ ಭಾರತಕ್ಕೆ ಕಾಲಿಡುವುದು ಖಚಿತವಾಗಿದೆ. ಅಂದರೆ 2016 ರ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ್ ಭಾರತದಲ್ಲಿ ಪಂದ್ಯವಾಡಿಲ್ಲ. ಹೀಗಾಗಿ ಭಾರತದಲ್ಲೇ ಇಂಡೊ-ಪಾಕ್ (India vs Pakistan) ಕದನವನ್ನು ವೀಕ್ಷಿಸಲು ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕಳೆದ 7 ವರ್ಷಗಳಲ್ಲಿ ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಯಾಗಿದೆ. ಅದರಲ್ಲೂ ಪಾಕಿಸ್ತಾನ್ ತಂಡವು ಈ ಹಿಂದೆಗಿಂತಲೂ ಬಲಿಷ್ಠವಾಗಿದೆ ಎಂದರೆ ತಪ್ಪಾಗಲಾರದು.
ಏಕೆಂದರೆ ಕಳೆದೊಂದು ದಶಕದಲ್ಲಿ ಏಕಪಕ್ಷೀಯವಾಗಿ ಸಾಗುತ್ತಿದ್ದ ಇಂಡೊ-ಪಾಕ್ ಕದನದಲ್ಲಿ ಇದೀಗ ಪಾಕಿಸ್ತಾನ್ ತಂಡ ಪೈಪೋಟಿ ನೀಡಲು ಪ್ರಾರಂಭಿಸಿದೆ. ಇದಕ್ಕೆ ಸಾಕ್ಷಿಯೇ ಉಭಯ ತಂಡಗಳ ನಡುವಣ ಕಳೆದ 4 ಪಂದ್ಯಗಳ ಫಲಿತಾಂಶ. ಕೊನೆಯ ನಾಲ್ಕು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ 2 ಪಂದ್ಯ ಗೆದ್ದಿದ್ದರೆ, ಪಾಕಿಸ್ತಾನ್ ತಂಡ ಕೂಡ 2 ರಲ್ಲಿ ಜಯ ಸಾಧಿಸಿದೆ. ಹೀಗಾಗಿಯೇ ಈ ಬಾರಿ ಕೂಡ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
7 ವರ್ಷಗಳಲ್ಲಿ ಮಹತ್ವದ ಬದಲಾವಣೆ:
2016 ರಲ್ಲಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ್ ತಂಡದ ಯಾವುದೇ ಆಟಗಾರರು ಪ್ರಸ್ತುತ ಟೀಮ್ನಲ್ಲಿಲ್ಲ. ಅಂದು ತಂಡದಲ್ಲಿದ್ದ ಬಹುತೇಕ ಪಾಕಿಸ್ತಾನಿ ಆಟಗಾರರು ನಿವೃತ್ತಿ ಹೊಂದಿದ್ದರೆ, ಕೆಲವರು ತಂಡದಿಂದ ಹೊರಬಿದ್ದಿದ್ದಾರೆ.
2016ರಲ್ಲಿ ಟೀಮ್ ಇಂಡಿಯಾ ವಿರುದ್ಧ ಆಡಿದ್ದ ಪಾಕಿಸ್ತಾನ್ ಪ್ಲೇಯಿಂಗ್ 11:
ಶರ್ಜೀಲ್ ಖಾನ್ , ಅಹ್ಮದ್ ಶೆಹಝಾದ್ , ಮೊಹಮ್ಮದ್ ಹಫೀಜ್ , ಉಮರ್ ಅಕ್ಮಲ್ , ಶೋಯೆಬ್ ಮಲಿಕ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಶಾಹಿದ್ ಅಫ್ರಿದಿ (ನಾಯಕ) , ವಹಾಬ್ ರಿಯಾಝ್ , ಮೊಹಮ್ಮದ್ ಸಮಿ , ಮೊಹಮ್ಮದ್ ಅಮೀರ್ , ಮೊಹಮ್ಮದ್ ಇರ್ಫಾನ್.
ನಾಯಕ ಸೇರಿದಂತೆ ಎಲ್ಲವೂ ಬದಲು:
ಈ ಬಾರಿ ಬಾಬರ್ ಆಝಂ ನೇತೃತ್ವದಲ್ಲಿ ಪಾಕ್ ಪಡೆ ಭಾರತಕ್ಕೆ ಆಗಮಿಸಲಿದೆ. ಇಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಾಬರ್ ಹಾಗೂ ರಿಝ್ವಾನ್ ಮುನ್ನಡೆಸಲಿದ್ದಾರೆ. ಹಾಗೆಯೇ ಬೌಲಿಂಗ್ ವಿಭಾಗದ ಜವಾಬ್ದಾರಿ ಶಾಹಿನ್ ಅಫ್ರಿದಿಗೆ ಹೆಗಲೇರಲಿದೆ. ಹೀಗಾಗಿ ಈ ಸಲ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಎದುರಿಸುತ್ತಿರುವುದು ಯಂಗ್ ಪಾಕಿಸ್ತಾನ್ ತಂಡವನ್ನು ಎಂಬುದು ವಿಶೇಷ.
ಭಾರತದಲ್ಲಿ ಆಡಿದ ಅನುಭವವಿಲ್ಲ:
ಪ್ರಸ್ತುತ ಪಾಕ್ ತಂಡದಲ್ಲಿರುವ ಯಾವುದೇ ಆಟಗಾರರು 2016ರ ತಂಡದಲ್ಲಿರಲಿಲ್ಲ. ಹೀಗಾಗಿಯೇ ಭಾರತದಲ್ಲಿ ಆಡಿದ ಅನುಭವ ಹೊಂದಿಲ್ಲ. ಹೀಗಾಗಿ ಎಲ್ಲಾ ಆಟಗಾರರು ಭಾರತದಲ್ಲಿ ಚೊಚ್ಚಲ ಪಂದ್ಯವಾಡಲಿದ್ದಾರೆ. ಇದುವೇ ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
ಟೀಮ್ ಇಂಡಿಯಾದಲ್ಲಿದ್ದಾರೆ ಪಂಚ ಪಾಂಡವರು:
2016 ರಲ್ಲಿ ಪಾಕಿಸ್ತಾನ್ ವಿರುದ್ಧ ಆಡಿದ ಭಾರತ ತಂಡ ಐವರು ಆಟಗಾರರು ಈಗಲೂ ತಂಡದಲ್ಲಿದ್ದಾರೆ. ಅಂದು ಪಾಕ್ ತಂಡಕ್ಕೆ ಸೋಲುಣಿಸಿದ್ದ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು.
ಈ ಬಾರಿಯ ಏಕದಿನ ವಿಶ್ವಕಪ್ ತಂಡದಲ್ಲೂ ಐವರು ಕಾಣಿಸಿಕೊಳ್ಳುವುದು ಖಚಿತ. ಅದರಲ್ಲೂ ಈ ಐವರು ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು ಎಂಬುದು ವಿಶೇಷ. ಈ ಅನುಭವಿ ಆಟಗಾರರೇ ಪಾಕ್ ತಂಡದ ಚಿಂತೆಯನ್ನು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಸೆಮಿಫೈನಲ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಗ್ಲೆನ್ ಮೆಕ್ಗ್ರಾಥ್
2016 ರಲ್ಲಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿದ ಭಾರತದ ಪ್ಲೇಯಿಂಗ್ 11:
ಶಿಖರ್ ಧವನ್ , ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ , ಸುರೇಶ್ ರೈನಾ , ಯುವರಾಜ್ ಸಿಂಗ್ , ಎಂಎಸ್ ಧೋನಿ (ನಾಯಕ) , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಆಶಿಶ್ ನೆಹ್ರಾ , ಜಸ್ಪ್ರೀತ್ ಬುಮ್ರಾ.
ಯಾವಾಗ ಭಾರತ-ಪಾಕಿಸ್ತಾನ್ ಪಂದ್ಯ:
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ. ಇನ್ನು ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 15 ರಂದು ಭಾರತ-ಪಾಕ್ ಮುಖಾಮುಖಿಗೆ ದಿನಾಂಕ ನಿಗದಿಯಾಗಿತ್ತು.
ಆದರೆ ಅದೇ ದಿನ ಗುಜರಾತ್ನಲ್ಲಿ ನವರಾತ್ರಿ ಕಾರ್ಯಕ್ರಮ ನಡೆಯುವುದರಿಂದ ಸೂಕ್ತ ಪೊಲೀಸ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಒಂದು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದೆ. ಅಲ್ಲದೆ ಮರುನಿಗದಿಯಾಗಿರುವ ಪಂದ್ಯಗಳ ಹೊಸ ವೇಳಾಪಟ್ಟಿ ಶ್ರೀಘ್ರದಲ್ಲೇ ಪ್ರಕಟಿಸಲಾಗುತ್ತದೆ.