‘ತಂಡದ ಕಳಪೆ ಪ್ರದರ್ಶನಕ್ಕೆ ಆಟಗಾರರೇ ಕಾರಣ’; ಪಾಕ್ ಮಂಡಳಿ ನಿರ್ದೇಶಕರ ಗಂಭೀರ ಆರೋಪ
Pakistan cricket team: ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿರುವ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಂಡದ ಕಳಪೆ ಪ್ರದರ್ಶನಕ್ಕೆ ಆಟಗಾರರೇ ಕಾರಣ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ನಡೆದ ಏಷ್ಯಾಕಪ್ನಿಂದ (Asia Cup 2023) ಆರಂಭವಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗಿನ ಭಿನ್ನಮತ ವರ್ಷ ಕಳೆದರೂ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಏಷ್ಯಾಕಪ್ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಪಾಕ್ ತಂಡ, ಆ ನಂತರ ನಡೆದ ಏಕದಿನ ವಿಶ್ವಕಪ್ನಲ್ಲೂ (ODI World Cup 2023) ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಅಲ್ಲಿಂದ ಆರಂಭವಾದ ಪಾಕ್ ತಂಡದಲ್ಲಿನ ಬದಲಾವಣೆಯ ಪರ್ವ ಇದುವರೆಗೂ ಮುಂದುವರೆದಿದೆ. ಈ ನಡುವೆ ತಂಡದ ನಾಯಕ, ಕೋಚ್, ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಹಲವರ ಹುದ್ದೆಗಳಲ್ಲೂ ಬದಲಾವಣೆ ಕಂಡುಬಂದಿತ್ತು. ಆದರೂ ತಂಡದ ಪ್ರದರ್ಶನದಲ್ಲಿ ಚೇತರಿಕೆ ಕಂಡುಬಂದಿಲ್ಲ. ವಿಶ್ವಕಪ್ ನಂತರ ಆಡಿದ್ದ ಟೆಸ್ಟ್ ಹಾಗೂ ಟಿ20 ಸರಣಿಗಳಲ್ಲಿ ಪಾಕ್ ತಂಡ (Pakistan cricket team) ಸೋಲು ಕಂಡಿದೆ. ಇದರಿಂದಾಗಿ ತಂಡದ ಪ್ರದರ್ಶನದ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಇದೀಗ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿರುವ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ (Mohammad Hafeez), ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಂಡದ ಕಳಪೆ ಪ್ರದರ್ಶನಕ್ಕೆ ಆಟಗಾರರೇ ಕಾರಣ ಎಂದು ಆರೋಪಿಸಿದ್ದಾರೆ.
ಸತತ ಎರಡು ಸರಣಿಗಳ ಸೋಲು
ಮೊಹಮ್ಮದ್ ಹಫೀಜ್ ಪಾಕಿಸ್ತಾನ ತಂಡದ ಕೋಚ್ ಮತ್ತು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಪಾಕಿಸ್ತಾನ ತಂಡ ಸತತ ಎರಡು ಸರಣಿಗಳನ್ನು ಕಳೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡ 3-0 ಅಂತರದ ಸೋಲನ್ನು ಎದುರಿಸಬೇಕಾಯಿತು. ಈ ಸರಣಿಯಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ಶಾನ್ ಮಸೂದ್ ಕೈಯಲ್ಲಿತ್ತು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡ 4-1 ಅಂತರದಲ್ಲಿ ಸೋಲು ಕಂಡಿತ್ತು. ಈ ಸರಣಿಯಲ್ಲಿ ಪಾಕಿಸ್ತಾನ ತಂಡದ ನಾಯಕತ್ವನ್ನು ಶಾಹೀನ್ ಶಾ ಆಫ್ರಿದಿವಹಿಸಿಕೊಂಡಿದ್ದರು. ನಾಯಕರೂ ಬದಲಾದರೂ ತಂಡದ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಅಲ್ಲೋಲ ಕಲ್ಲೋಲ; ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಝಾಕಾ ಅಶ್ರಫ್..!
ಇದೀಗ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮೌನ ಮುರಿದಿರುವ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್, ತಂಡದ ಆಟಗಾರರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತಂಡದ ಪರ ಆಡುವ ವಿಷಯಕ್ಕೆ ಬಂದಾಗ, ಪಾಕಿಸ್ತಾನಿ ಕ್ರಿಕೆಟಿಗರ ಗಮನವು ಆಟದ ಮೇಲೆ ಇರುವುದಕ್ಕಿಂತ ಹೆಚ್ಚಾಗಿ, ಫ್ರಾಂಚೈಸಿ ಕ್ರಿಕೆಟ್ ಕಡೆಗೆ ಇದೆ. ಇದರಿಂದ ಪಾಕಿಸ್ತಾನ ತಂಡ ಸೋಲನುಭವಿಸಿದೆ ಎಂದು ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಮಂಡಳಿ ವಿರುದ್ಧ ಆಟಗಾರರ ಆಕ್ರೋಶ
ಮೊಹಮ್ಮದ್ ಹಫೀಜ್ ಪಾಕಿಸ್ತಾನ ತಂಡದ ನಿರ್ದೇಶಕರಾದಾಗಿನಿಂದಲೂ ಅವರ ಕೆಲವು ನಿರ್ಧಾರಗಳಿಂದ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ. ಹಫೀಜ್ ತೆಗೆದುಕೊಂಡ ಸುದೀರ್ಘ ಸಭೆಗಳಿಂದಾಗಿ ಪಾಕಿಸ್ತಾನಿ ಆಟಗಾರರೂ ಅಸಮಾಧಾನಗೊಳ್ಳುವಂತೆ ಮಾಡಿದೆ. ಮತ್ತೊಂದೆಡೆ, ಪಾಕಿಸ್ತಾನಿ ಆಟಗಾರರು ವಿದೇಶಿ ಕ್ರಿಕೆಟ್ ಲೀಗ್‌ಗಳಿಗೆ ಎನ್‌ಒಸಿ ಪಡೆಯಲು ಸಾಧ್ಯವಾಗದಿರುವುದು ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಅಲ್ಲದೆ ಕೆಲವು ಹಿರಿಯ ಆಟಗಾರರು ಮತ್ತು ಮೊಹಮ್ಮದ್ ಹಫೀಜ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಯಾಗಿದೆ. ಪ್ರಸ್ತುತ, ಕೆಲವು ಪಾಕಿಸ್ತಾನಿ ಆಟಗಾರರು ಬಾಂಗ್ಲಾದೇಶ ಕ್ರಿಕೆಟ್ ಪ್ರೀಮಿಯರ್‌ನಲ್ಲಿ ಆಡುತ್ತಿದ್ದಾರೆ. ಆದರೆ ಕೆಲವು ಆಟಗಾರರು ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆದಿಲ್ಲ. ಇದರಲ್ಲಿ ಹ್ಯಾರಿಸ್ ರೌಫ್ ಕೂಡ ಇದ್ದು, ಎನ್‌ಒಸಿ ಪಡೆಯದ ಕಾರಣ ಹ್ಯಾರಿಸ್ ರೌಫ್ ಲೀಗ್ ತೊರೆದು ಪಾಕಿಸ್ತಾನಕ್ಕೆ ಮರಳಬೇಕಾಯಿತು. ಇದು ಕೂಡ ಮಂಡಳಿ ವಿರುದ್ಧ ಆಟಗಾರರ ಅಸಮಾಧಾನಕ್ಕೆ ಕೈಗನ್ನಡಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ