ಪಾಕಿಸ್ತಾನ್ ಟೆಸ್ಟ್ ತಂಡ ಪ್ರಕಟ: ಮತ್ತೆ ಬದಲಾದ ನಾಯಕ!

Pakistan Test Squad: ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 25 ರಿಂದ ಶುರುವಾಗಲಿದೆ. ಈ ಸರಣಿಯ ಬಳಿಕ ಪಾಕ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಮ್ಯಾಚ್​ಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗಳಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ.

ಪಾಕಿಸ್ತಾನ್ ಟೆಸ್ಟ್ ತಂಡ ಪ್ರಕಟ: ಮತ್ತೆ ಬದಲಾದ ನಾಯಕ!
Pakistan Team
Image Credit source: PCB

Updated on: Jul 05, 2026 | 2:04 PM

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರುಗಳ ಈ ತಂಡದ ನಾಯಕನಾಗಿ ಆಯ್ಕೆಯಾಗಿರುವುದು ಬಾಬರ್ ಆಝಂ. ಇತ್ತೀಚಿನ ಸರಣಿಗಳಲ್ಲಿನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಶಾನ್ ಮಸೂದ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಬದಲಿಗೆ ಬಾಬರ್ ಆಝಂ ಅವರಿಗೆ ಮತ್ತೆ ರೆಡ್-ಬಾಲ್ ಕ್ರಿಕೆಟ್‌ನ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

ನಾಯಕತ್ವ ಬದಲಾವಣೆಗೆ ಕಾರಣ!

ಪಾಕಿಸ್ತಾನ್ ತಂಡದ ಮುಖ್ಯ ಆಯ್ಕೆಗಾರ ಆಕಿಬ್ ಜಾವೇದ್ ಭಾನುವಾರ ಲಹೋರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶಾನ್ ಮಸೂದ್ ನಿರೀಕ್ಷಿತ ಮಟ್ಟದಲ್ಲಿ ತಂಡವನ್ನು ಮುನ್ನಡೆಸಲು ಸಾಧ್ಯವಾಗದ ಕಾರಣ ಬಾಬರ್ ಆಝಂ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧ 2-0 ಅಂತರದ ಐತಿಹಾಸಿಕ ಮುಖಭಂಗ ಸೇರಿದಂತೆ ಸತತ ಸೋಲುಗಳನ್ನು ಅನುಭವಿಸಿ ಪ್ರಸ್ತುತ WTC ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು. ಅದರಂತೆ ಇದೀಗ ಅನುಭವಿ ಆಟಗಾರನಾಗಿರುವ ಬಾಬರ್ ಆಝಂಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ ಎಂದು ಆಕಿಬ್ ಜಾವೇದ್ ತಿಳಿಸಿದ್ದಾರೆ.

ಪ್ರಮುಖ ಆಟಗಾರರಿಗೆ ಗೇಟ್ ಪಾಸ್:

ಎರಡು ಸರಣಿಗಳಿಗಾಗಿ ಆಯ್ಕೆ ಮಾಡಲಾದ ಈ ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ. ಪಾಕ್ ತಂಡದ ಸ್ಟಾರ್ ವೇಗಿಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಹಸನ್ ಅಲಿ ಅವರನ್ನು ಕಳಪೆ ಫಾರ್ಮ್‌ನಿಂದಾಗಿ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

ಇದರೊಂದಿಗೆ ಹಿರಿಯ ಸ್ಪಿನ್ನರ್ ನೋಮನ್ ಅಲಿ ಕೂಡ ಸ್ಥಾನ ಕಳೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್ ಅವರನ್ನು ಫಿಟ್ನೆಸ್ ಸಮಸ್ಯೆಯ ಕಾರಣದಿಂದಾಗಿ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗಿಡಲಾಗಿದ್ದು, ಇಂಗ್ಲೆಂಡ್ ಪ್ರವಾಸದ ವೇಳೆಗೆ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ 17ನೇ ಸದಸ್ಯರಾಗಿ ಸೇರ್ಪಡೆಯಾಗಲಿದ್ದಾರೆ.

ಹೊಸ ಮುಖಗಳ ಎಂಟ್ರಿ:

ಹಿರಿಯ ಆಟಗಾರರನ್ನು ಕೈ ಬಿಟ್ಟು ಯುವ ಪ್ರತಿಭೆಗಳಿಗೆ ಮಣೆ ಹಾಕಿರುವ ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ, ಒಟ್ಟು  ನಾಲ್ವರು ಅನ್‌ಕ್ಯಾಪ್ಡ್ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅವರೆಂದರೆ…

  • ಉಬೈದ್ ಶಾ (ಖ್ಯಾತ ವೇಗಿ ನಸೀಮ್ ಶಾ ಅವರ ಕಿರಿಯ ಸಹೋದರ)
  • ಅಲಿ ಉಸ್ಮಾನ್ (ಪಾಕ್ ದೇಶೀಯ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ನರ್)
  •  ಮುಹಮ್ಮದ್ ಅವೈಸ್ ಝಫರ್ (ಬ್ಯಾಟರ್)
  • ಮುಹಮ್ಮದ್ ಘಾಝಿ ಘೋರಿ (ವಿಕೆಟ್ ಕೀಪರ್ ಬ್ಯಾಟರ್)

ಇದನ್ನೂ ಓದಿ: RCB ಎಡಿಷನ್ ಫೋನ್: ಏನಿದರ ವಿಶೇಷತೆ?

ಪಾಕಿಸ್ತಾನ್ ಟೆಸ್ಟ್ ತಂಡ: ಬಾಬರ್ ಆಝಂ (ನಾಯಕ), ಶಾನ್ ಮಸೂದ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಇಮಾಮ್-ಉಲ್-ಹಕ್, ಅಬ್ದುಲ್ಲಾ ಫಝಲ್, ಅಝಾನ್ ಅವೈಸ್, ಸಲ್ಮಾನ್ ಅಲಿ ಆಘಾ, ಸಾಜಿದ್ ಖಾನ್, ಅಮಿರ್ ಜಮಾಲ್, ಖುರ್ರಮ್ ಶಹಝಾದ್, ಮೊಹಮ್ಮದ್ ಅಬ್ಬಾಸ್, ಅವೈಸ್ ಝಫರ್ ಮೊಹಮ್ಮದ್ ಅಲಿ, ಅಲಿ ಉಸ್ಮಾನ್, ಉಬೈದ್ ಶಾ, ಮುಹಮ್ಮದ್ ಘೋರಿ (ವಿಕೆಟ್ ಕೀಪರ್) ಮತ್ತು ಸೌದ್ ಶಕೀಲ್.

 

 

 

Published On - 2:00 pm, Sun, 5 July 26

Follow Us