ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬರಲ್ಲ ಪಾಕಿಸ್ತಾನ್ ತಂಡ
T20 World Cup 2026: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇಲ್ಲಿ ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ನೇರ ಅರ್ಹತೆ ಪಡೆದರೆ, ಉಳಿದ ತಂಡಗಳು ರ್ಯಾಂಕಿಂಗ್ ಹಾಗೂ ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಟ್ಟಿದೆ.

ಟಿ20 ವಿಶ್ವಕಪ್ 2026ರ ಸಿದ್ಧತೆಗಳು ಶುರುವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಫೆಬ್ರವರಿ 7 ರಿಂದ ಶುರುವಾಗಲಿದೆ. ಈ ಪಂದ್ಯಾವಳಿಗಾಗಿ ಈಗಾಗಲೇ ಸ್ಥಳಗಳನ್ನು ನಿಗದಿ ಮಾಡಲಾಗಿದ್ದು, ಅದರಂತೆ ಭಾರತದಲ್ಲಿ 5 ಸ್ಟೇಡಿಯಂನಲ್ಲಿ ಮ್ಯಾಚ್ಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಶ್ರೀಲಂಕಾದ ಮೂರು ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ.
2024 ರಿಂದ 2027 ರವರೆಗಿನ ಐಸಿಸಿ ಈವೆಂಟ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲಾಗುವುದು ಎಂದು ಐಸಿಸಿ ಈ ಹಿಂದೆ ದೃಢಪಡಿಸಿತ್ತು. ಅದರಂತೆ ಮುಂಬರುವ ಟಿ20 ವಿಶ್ವಕಪ್ನ ಭಾರತ-ಪಾಕ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುವುದು ಬಹುತೇಕ ಖಚಿತ.
ಅಷ್ಟೇ ಅಲ್ಲದೆ ಪಾಕಿಸ್ತಾನ್ ಆಡಲಿರುವ ಎಲ್ಲಾ ಪಂದ್ಯಗಳು ಶ್ರೀಲಂಕಾದ ಮೂರು ಸ್ಟೇಡಿಯಂಗಳಲ್ಲೇ ನಡೆಯಲಿದೆ. ಇದಕ್ಕೆ ಮುಖ್ಯ ಕಾರಣ ಭಾರತವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡದಿರುವುದು.
2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ್ ಆತಿಥ್ಯವಹಿಸಿತ್ತು. ಇದಾಗ್ಯೂ ಪಾಕ್ನಲ್ಲಿ ಟೂರ್ನಿ ಆಡಲು ಬಿಸಿಸಿಐ ನಿರಾಕರಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಅದರಂತೆ ಭಾರತದ ಪಂದ್ಯಗಳನ್ನು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲಾಗಿತ್ತು.
ಇತ್ತ ಭಾರತ ತಂಡವು ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಡಲು ನಿರಾಕರಿಸಿದ್ದರಿಂದ ಮುಂದೆ ಪಾಕ್ ತಂಡ ಕೂಡ ಭಾರತದಲ್ಲಿ ಐಸಿಸಿ ಟೂರ್ನಿ ಆಡುವುದಿಲ್ಲ ಎಂದು ತಿಳಿಸಿತ್ತು. ಈ ಬೇಡಿಕೆಗೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಪ್ಪಿಗೆ ನೀಡಿದ್ದರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಇದೀಗ ಈ ಒಪ್ಪಂದದ ಪ್ರಕಾರ ಟಿ20 ವಿಶ್ವಕಪ್ನ ಪಾಕಿಸ್ತಾನ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ.
ಸೆಮಿಫೈನಲ್, ಫೈನಲ್ ಪಂದ್ಯ ಶಿಫ್ಟ್:
ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದರೆ ಆ ಮ್ಯಾಚ್ ಶ್ರೀಲಂಕಾದಲ್ಲಿ ನಡೆಯಲಿದೆ. ಹಾಗೆಯೇ ಫೈನಲ್ಗೆ ತಲುಪಿದರೂ 2026ರ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾದಲ್ಲಿ ಆಯೋಜಿಸುವುದಾಗಿ ಐಸಿಸಿ ತಿಳಿಸಿದೆ. ಇನ್ನು ಪಾಕ್ ತಂಡ ನಾಕೌಟ್ ಹಂತಕ್ಕೇರದಿದ್ದರೆ ಫೈನಲ್ ಮ್ಯಾಚ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ ಪಂದ್ಯಗಳು ನಡೆಯುವ ನಗರಗಳು:
- ಮುಂಬೈ (ವಾಂಖೆಡೆ ಸ್ಟೇಡಿಯಂ)
- ದೆಹಲಿ (ಅರುಣ್ ಜೇಟ್ಲಿ ಸ್ಟೇಡಿಯಂ)
- ಕೋಲ್ಕತ್ತಾ (ಈಡನ್ ಗಾರ್ಡನ್ಸ್ ಸ್ಟೇಡಿಯಂ)
- ಅಹಮದಾಬಾದ್ (ನರೇಂದ್ರ ಮೋದಿ ಸ್ಟೇಡಿಯಂ)
- ಚೆನ್ನೈ (ಚೆಪಾಕ್ ಸ್ಟೇಡಿಯಂ)
- ಕೊಲಂಬೊ (ಶ್ರೀಲಂಕಾ)
- ಪಲ್ಲೆಕೆಲೆ (ಶ್ರೀಲಂಕಾ)
- ದಂಬುಲ್ಲಾ (ಶ್ರೀಲಂಕಾ)
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಾಣ
ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ತಂಡಗಳು:
- ಭಾರತ
- ಶ್ರೀಲಂಕಾ
- ಪಾಕಿಸ್ತಾನ್
- ಬಾಂಗ್ಲಾದೇಶ್
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ವೆಸ್ಟ್ ಇಂಡೀಸ್
- ಐರ್ಲೆಂಡ್
- ನ್ಯೂಝಿಲೆಂಡ್
- ಅಫ್ಘಾನಿಸ್ತಾನ್
- ಸೌತ್ ಆಫ್ರಿಕಾ
- ಯುಎಸ್ಎ
- ಕೆನಡಾ
- ನೆದರ್ಲೆಂಡ್ಸ್
- ಇಟಲಿ
- ನಮೀಬಿಯಾ
- ಝಿಂಬಾಬ್ವೆ
- ನೇಪಾಳ
- ಒಮಾನ್
- ಯುಎಇ.
