ಕೇವಲ 44 ದಿನಗಳಲ್ಲೇ ಭಾರತದ ವಿಶ್ವ ದಾಖಲೆ ಉಡೀಸ್ ಮಾಡಿದ ಸೌತ್ ಆಫ್ರಿಕಾ
India A vs South Africa A: ಭಾರತ ಮತ್ತು ಸೌತ್ ಆಫ್ರಿಕಾ ಎ ತಂಡಗಳ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ಎ ತಂಡ 3 ವಿಕೆಟ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಎ ತಂಡ 5 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 1-1 ಅಂತರದಿಂದ ಅಂತ್ಯಗೊಳಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದು ಸೌತ್ ಆಫ್ರಿಕಾ ಎ ತಂಡ. ಅದು ಕೂಡ ನಾಲ್ಕನೇ ಇನಿಂಗ್ಸ್ನಲ್ಲಿ 400+ ರನ್ ಬೆನ್ನಟ್ಟಿ ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ‘ಎ’ ತಂಡಗಳ ನಡುವಣ ಪ್ರಥಮ ದರ್ಜೆ ಪಂದ್ಯದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದ ವಿಶ್ವ ದಾಖಲೆ ಇದೀಗ ಸೌತ್ ಆಫ್ರಿಕಾ ಎ ತಂಡದ ಪಾಲಾಗಿದೆ.
ಬೆಂಗಳೂರಿನ ಸೆಂಟ್ರಲ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು ಪ್ರಥಮ ಇನಿಂಗ್ಸ್ನಲ್ಲಿ 255 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ಎ 221 ರನ್ಗಳಿಸಿ ಆಲೌಟ್ ಆಗಿತ್ತು.
34 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 382 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಕೊನೆಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 417 ರನ್‌ಗಳ ಗುರಿ ನೀಡಿದ್ದರು.
417 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಜೋರ್ಡನ್ ಹರ್ಮನ್ (91) ಮತ್ತು ಲೆಸೆಗೊ ಸೊನೊಕ್ವಾನೆ (77) 156 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ನೀಡಿದರು. ಆ ನಂತರ ಬಂದ ಝುಬೈರ್ ಹಮ್ಝ (77) ಅರ್ಧಶತಕ ಬಾರಿಸಿದರು. ಇನ್ನು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ 59 ರನ್‌ಗಳ ಕೊಡುಗೆ ನೀಡಿದರು.
ಇನ್ನು ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾನರ್ ಎಸ್ಟರ್‌ಹುಯಿಜೆನ್ ಕೇವಲ 53 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 52 ರನ್ ಬಾರಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 417 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿತು.
ಹೊಸ ವಿಶ್ವ ದಾಖಲೆ:
‘ಎ’ ತಂಡಗಳ ನಡುವಣ ಟೆಸ್ಟ್ ಪಂದ್ಯಗಳಲ್ಲಿ 400+ ರನ್ ಚೇಸ್ ಮಾಡಿ ಗೆದ್ದಿರುವುದು ಕೇವಲ ಎರಡು ಬಾರಿ ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಭಾರತ. ಅಕ್ಟೋಬರ್ 1, 2025 ರಂದು ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡ ನೀಡಿದ 413 ರನ್ಗಳನ್ನು ಚೇಸ್ ಮಾಡಿ ಭಾರತ ಎ ತಂಡ ವಿಶ್ವ ದಾಖಲೆ ನಿರ್ಮಿಸಿದ್ದರು.
ಆದರೀಗ ಈ ವರ್ಲ್ಡ್ ರೆಕಾರ್ಡ್ ಮುರಿಯುವಲ್ಲಿ ಸೌತ್ ಆಫ್ರಿಕಾ ಎ ತಂಡ ಯಶಸ್ವಿಯಾಗಿದೆ. ಭಾರತ ಎ ತಂಡ ನೀಡಿದ 417 ರನ್‌ಗಳ ಗುರಿ ಬೆನ್ನತ್ತಿ ಸೌತ್ ಆಫ್ರಿಕಾ ಎ ತಂಡವು ‘A’ ತಂಡಗಳ ನಡುವಣ ಪ್ರಥಮ ದರ್ಜೆ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿದ ವಿಶ್ವ ದಾಖಲೆ ನಿರ್ಮಿಸಿದೆ.
ಭಾರತ ಎ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಅಭಿಮನ್ಯು ಈಶ್ವರನ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಧ್ರುವ್ ಜುರೆಲ್ , ರಿಷಭ್ ಪಂತ್ (ನಾಯಕ) , ಹರ್ಷ್ ದುಬೆ , ಆಕಾಶ್ ದೀಪ್ , ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2026: ಇಬ್ಬರನ್ನು ನೀಡಿ ಸಂಜು ಸ್ಯಾಮ್ಸನ್ನ ಪಡೆಯಲಿರುವ CSK
ಸೌತ್ ಆಫ್ರಿಕಾ ಎ ಪ್ಲೇಯಿಂಗ್ 11: ಜೋರ್ಡನ್ ಹರ್ಮನ್ , ಲೆಸೆಗೊ ಸೆನೋಕ್ವಾನೆ , ಟೆಂಬಾ ಬವುಮಾ , ಝುಬೈರ್ ಹಮ್ಝ , ಮಾರ್ಕ್ವೆಸ್ ಅಕರ್ಮನ್, ಕಾನರ್ ಎಸ್ಟರ್‌ಹುಯಿಜೆನ್ (ವಿಕೆಟ್ ಕೀಪರ್) , ಟಿಯಾನ್ ವ್ಯಾನ್ ವುರೆನ್ , ಕೈಲ್ ಸಿಮಂಡ್ಸ್ ,ಪ್ರೆನೆಲನ್ ಸುಬ್ರಯೇನ್ , ತ್ಸೆಪೋ ಮೊರೆಕಿ , ಒಕುಹ್ಲೆ ಸೆಲೆ.
