- Kannada News Photo gallery Cricket photos South Africa become the first team to win a T20I batting first in Rawalpindi.
ಪಾಕಿಸ್ತಾನದಲ್ಲಿ ಇತಿಹಾಸ ನಿರ್ಮಿಸಿದ ಸೌತ್ ಆಫ್ರಿಕಾ
Pakistan vs South Africa, 1st T20I: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ರಾವಲ್ಪಿಂಡಿಯಲ್ಲಿ ಆಫ್ರಿಕಾ ಪಡೆ ಹೊಸ ಇತಿಹಾಸವನ್ನು ಸಹ ನಿರ್ಮಿಸಿರುವುದು ವಿಶೇಷ.
Updated on: Oct 29, 2025 | 8:23 AM

ಪಾಕಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ರೀಝ ಹೆಂಡ್ರಿಕ್ಸ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭಿಕನಾಗಿ ಕಣಕ್ಕಿಳಿದ ಹೆಂಡ್ರಿಕ್ಸ್ 40 ಎಸೆತಗಳಲ್ಲಿ 1 ಸಿಕ್ಸ್, 5 ಫೋರ್ ಗಳೊಂದಿಗೆ 60 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 194 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಸೈಮ್ ಅಯ್ಯೂಬ್ 37 ರನ್ಗಳಿಸಿದ್ದೇ ಗರಿಷ್ಠ ಸ್ಕೋರ್. ಪರಿಣಾಮ ಪಾಕ್ ಪಡೆ 18.1 ಓವರ್‌ಗಳಲ್ಲಿ 139 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡವು ಮೊದಲ ಟಿ20 ಪಂದ್ಯದಲ್ಲಿ 55 ರನ್ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ರಾವಲ್ಪಿಂಡಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿ ಗೆಲುವು ದಾಖಲಿಸಿದ ತಂಡವೆಂಬ ಕೀರ್ತಿಯೊಂದು ಸೌತ್ ಆಫ್ರಿಕಾ ತಂಡದ ಪಾಲಾಗಿದೆ. ಈ ಮೈದಾನದಲ್ಲಿ ಈವರೆಗೆ 8 ಟಿ20 ಪಂದ್ಯಗಳನ್ನಾಡಲಾಗಿದೆ. ಈವರೆಗೆ ಯಾವುದೇ ತಂಡ ಮೊದಲು ಬ್ಯಾಟ್ ಮಾಡಿ ಗೆದ್ದಿರಲಿಲ್ಲ.

ಅದರಲ್ಲೂ ಆತಿಥೇಯ ಪಾಕಿಸ್ತಾನ್ ತಂಡಕ್ಕೂ ಕೂಡ ತವರು ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಪಾಕ್ ಪಡೆಯನ್ನು ಬಗ್ಗು ಬಡಿದು, ರಾವಲ್ಪಿಂಡಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದ ಮೊದಲ ತಂಡವೆಂಬ ಭರ್ಜರಿ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ.
