
ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ವಿಶ್ವ ಇಲೆವೆನ್ ಹೆಸರಿಸಿದ್ದಾರೆ. ಪ್ರಸ್ತುತ ಆಡುತ್ತಿರುವ ವಿಶ್ವದ ಅತ್ಯುತ್ತಮ ಟಿ20 ಆಟಗಾರರನ್ನು ಒಳಗೊಂಡಿರುವ ಈ ಇಲೆವೆನ್ನಲ್ಲಿ ವಿರಾಟ್ ಕೊಹ್ಲಿಗೆ (Virat Kohli) ಸ್ಥಾನ ನೀಡಿಲ್ಲ ಎಂಬುದೇ ಅಚ್ಚರಿ. ಪಾಡ್ ಕಾಸ್ಟ್ವೊಂದರಲ್ಲಿ ಕಾಣಿಸಿಕೊಂಡ ಬಾಬರ್ಗೆ ವರ್ಲ್ಡ್ ಟಿ20 ಇಲೆವೆನ್ ಹೆಸರಿಸುವಂತೆ ಕೇಳಿಕೊಳ್ಳಲಾಗಿತ್ತು.
ಈ ವೇಳೆ ಇಬ್ಬರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಿದರೂ, ಬಾಬರ್ ಆಝಂ ವಿಶ್ವದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಪ್ರಸ್ತಾಪಿಸದೇ ಇರುವುದು ಚರ್ಚೆಗೆ ಕಾರಣವಾಗಿದೆ.
ಬಾಬರ್ ಆಝಂ ತನ್ನ ವರ್ಲ್ಡ್ ಟಿ20 ಇಲೆವೆನ್ನಲ್ಲಿ ಆರಂಭಿಕರಾಗಿ ಭಾರತದ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಮೂರನೇ ಕ್ರಮಾಂಕಕ್ಕೆ ಪಾಕಿಸ್ತಾನದ ಎಡಗೈ ದಾಂಡಿಗ ಫಖರ್ ಝಮಾನ್ ಅವರನ್ನು ಹೆಸರಿಸಿದ್ದಾರೆ.
ನಾಲ್ಕನೇ ಕ್ರಮಾಂಕಕ್ಕೆ ಭಾರತದ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದರೆ, ಐದನೇ ಕ್ರಮಾಂಕದಲ್ಲಿ ಇಂಗ್ಲೆಂಡ್ನ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಹೆಸರಿಸಿದ್ದಾರೆ. ಇನ್ನು ಫಿನಿಶರ್ ಪಾತ್ರದಲ್ಲಿ ಆರನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಆಲ್ರೌಂಡರ್ಗಳಾಗಿ ಸೌತ್ ಆಫ್ರಿಕಾ ಮಾರ್ಕೊ ಯಾನ್ಸೆನ್ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೆಯೇ ವೇಗಿಗಳಾಗಿ ಇಂಗ್ಲೆಂಡ್ನ ಮಾರ್ಕ್ವುಡ್ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಹೆಸರಿಸಿದ್ದಾರೆ.
ಇತ್ತ ಭಾರತದ ಸೂರ್ಯಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಾಬರ್ ಆಝಂ, ವಿರಾಟ್ ಕೊಹ್ಲಿಯ ಹೆಸರನ್ನು ಪ್ರಸ್ತಾಪಿಸದೇ ಇರುವುದೇ ಈಗ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಮೂರು ಸ್ವರೂಪಗಳಲ್ಲೂ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಾಗ್ಯೂ ಕಿಂಗ್ ಕೊಹ್ಲಿಯ ಹೆಸರು ಪ್ರಸ್ತಾಪಿಸದೇ ಬಾಬರ್, ಉಳಿದವರನ್ನು ಆಯ್ಕೆ ಮಾಡಿಕೊಂಡಿರುವುದು ಚರ್ಚೆ ಗ್ರಾಸವಾಗಿದೆ.
ಇದನ್ನೂ ಓದಿ: IPL 2025: RCB ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ CWI