ಇಷ್ಟರಲ್ಲೆ ಸ್ಟಾರ್ ಆಟಗಾರನೊಬ್ಬನ ನಿವೃತ್ತಿ; ಆಘಾತಕಾರಿ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ
Pakistan Cricket Crisis: ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಸೋಲಿನ ನಂತರ, ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ತಂಡದ ಸ್ಟಾರ್ ಆಟಗಾರನೊಬ್ಬನ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. ತಂಡದ ನಿರಂತರ ಸೋಲುಗಳು ಮತ್ತು ಪಿಸಿಬಿ ಆಡಳಿತದ ಮೇಲೆ ಅವರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅರ್ಹತೆಯ ಆಧಾರದ ಮೇಲೆ ಆಟಗಾರರ ಆಯ್ಕೆ ಮತ್ತು ಆಡಳಿತದ ಕೊರತೆಯನ್ನು ಲತೀಫ್ ಖಂಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುವ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಸತತ ಎರಡು ಸೋಲುಗಳನ್ನು ಎದುರಿಸಿರುವ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯಗೊಳ್ಳುವ ಆತಂಕ ಎದುರಾಗಿದ್ದರೆ, ಮತ್ತೊಂದೆಡೆ ತಂಡದ ಮಾಜಿ ಆಟಗಾರರು ಹಾಗೂ ಅನುಭವಿಗಳ ಟೀಕಾ ಪ್ರಹಾರವನ್ನು ಅರಗಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಪಾಕ್ ಆಟಗಾರರನ್ನು ಕಾಡಲಾರಂಭಿಸಿದೆ. ಭಾರತ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಪಾಕ್ ತಂಡವನ್ನು ನಿರಂತರವಾಗಿ ಜರಿಯಲಾಗುತ್ತಿದೆ. ಮಾಜಿ ಆಟಗಾರರು ಇನ್ನಿಲ್ಲದಂತೆ ತಂಡದ ಮಾನ ಹರಾಜು ಹಾಕುತ್ತಿದ್ದಾರೆ. ಈ ನಡುವೆ ತಂಡದ ಮಾಜಿ ಆಟಗಾರ ರಶೀದ್ ಲತೀಫ್, ಇಷ್ಟರಲ್ಲೇ ತಂಡದಲ್ಲಿರುವ ಸ್ಟಾರ್ ಆಟಗಾರರು ನಿವೃತ್ತರಾಗಲಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಕೋಚ್ ಮತ್ತು ಆಯ್ಕೆದಾರ ರಶೀದ್ ಲತೀಫ್ ಅವರನ್ನು ಉಲ್ಲೇಖಿಸಿ ಆಘಾತಕಾರಿ ಹೇಳಿಕೆಯನ್ನು ನೀಡಲಾಗಿದೆ. ದುಬೈನಲ್ಲಿ ಪಾಕ್ ತಂಡದ ಸೋಲಿನ ನಂತರ, ಪಾಕಿಸ್ತಾನದ ಸ್ಟಾರ್ ಆಟಗಾರನೊಬ್ಬ ಶೀಘ್ರದಲ್ಲೇ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿದುಬಂದಿದೆ. ಈಗ ಪ್ರಶ್ನೆ ಏನೆಂದರೆ ಈ ಆಟಗಾರ ಯಾರು ಎಂಬುದು.
ಯಾರು ನಿವೃತ್ತರಾಗಲಿದ್ದಾರೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವಿಶ್ಲೇಷಿಸಲು ರಶೀದ್ ಲತೀಫ್ ಪಾಕಿಸ್ತಾನಿ ಟಿವಿ ಕಾರ್ಯಕ್ರಮ ‘ಹನ್ಸ್ನಾ ಮನಾ ಹೈ’ಗೆ ಬಂದಿದ್ದರು. ಈ ಸಮಯದಲ್ಲಿ, ಮೊಹಮ್ಮದ್ ಆಮಿರ್ ಮತ್ತು ಅಹ್ಮದ್ ಶಹಜಾದ್ ಕೂಡ ಅವರೊಂದಿಗೆ ಇದ್ದರು. ನಂತರ ಕಾರ್ಯಕ್ರಮದ ನಿರೂಪಕ ತಬಿಶ್ ಹಶ್ಮಿ, ರಶೀದ್ ಲತೀಫ್ ಅವರ ಬಳಿ, ತಂಡದ ಸ್ಟಾರ್ ಕ್ರಿಕೆಟಿಗನೊಬ್ಬ ಇಷ್ಟರಲ್ಲೇ ನಿವೃತ್ತಿ ಘೋಷಿಸಲಿದ್ದಾನೆ ಎಂಬ ಮಾಹಿತಿ ಇದೆ. ಇದಕ್ಕೆ ಏನು ಹೇಳ್ತೀರಿ ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಲತೀಫ್, ಮುಂದಿನ ದಿನಗಳಲ್ಲಿ ಅದರ ಬಗ್ಗೆ ತಿಳಿಯಲಿದೆ ಎಂದರು. ಇದಾದ ನಂತರ, ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಕ್ಕಾಗಿ ಲತೀಫ್ ನಿರೂಪಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ‘ಇನ್ನು ಮುಂದೆ ನಾನು ನಿನಗೆ ತಂಡದ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ’ ಎಂದರು.
بڑے کھلاڑی کی جلد کرکٹ سے ریٹائرمنٹ؟ تابش نے اشارہ دے دیا pic.twitter.com/O6az2Z12KL
— Geo News Urdu (@geonews_urdu) February 23, 2025
ಪಿಸಿಬಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಲತೀಫ್
ಇನ್ನು ಪಾಕಿಸ್ತಾನದ ಸೋಲಿನ ಬಗ್ಗೆ ಮಾತನಾಡಿರುವ ರಶೀದ್ ಲತೀಫ್, ‘ಕಳೆದ 15 ವರ್ಷಗಳಲ್ಲಿ ನನಗೆ ಎರಡು ಬಾರಿ ಸಂತೋಷದ ಕ್ಷಣ ಎದುರಾಗಿದೆ. 2009 ರಲ್ಲಿ ಒಮ್ಮೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಾಗ ಮತ್ತು 2017 ರಲ್ಲಿ ಎರಡನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಾಗ ನಾನು ಸಂತೋಷಗೊಂಡಿದೆ ಎಂದರು. ಆ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ಮೇಲೆ ಪ್ರಶ್ನೆಗಳನ್ನು ಎತ್ತಿದ ಲತೀಪ್, ಯಾವುದೇ ಆಯ್ಕೆಯು ಅರ್ಹತೆಯನ್ನು ಆಧರಿಸಿಲ್ಲದ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ.
‘ನಿಮ್ಮ ಅಧ್ಯಕ್ಷರು ಅರ್ಹತೆಯ ಮೇಲೆ ಆಯ್ಕೆಯಾದಾಗ ಅರ್ಹತೆ ಬರುತ್ತದೆ. ಅದೇ ಅರ್ಹತೆಯ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡದಿದ್ದರೆ, ನೀವು ಇದೇ ರೀತಿಯ ಫಲಿತಾಂಶಗಳನ್ನು ನೋಡುತ್ತೀರಿ. ಪಿಸಿಬಿ ಅಧ್ಯಕ್ಷರ ಜೊತೆ ಕೆಲಸ ಮಾಡುತ್ತಿರುವವರಿಗೆ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ನೀವು ಕ್ರೀಡಾಂಗಣವನ್ನು ನಿರ್ಮಿಸಬಹುದು, ಆದರೆ ನಿಮಗೆ ಆಟದ ಬಗ್ಗೆ ಏನೂ ತಿಳಿದಿಲ್ಲ. ಅರ್ಹತೆ ಮೇಲಿನಿಂದ ಬರುವುದು ಮುಖ್ಯ’ ಎಂದು ಲತೀಫ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Mon, 24 February 25
