AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್​ಸಿಬಿ ಆಟಗಾರ

Parvez Rasool Retires: ಟೀಂ ಇಂಡಿಯಾ ಆಟಗಾರ ಪರ್ವೇಜ್ ರಸೂಲ್ 36ನೇ ವಯಸ್ಸಿಗೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಭಾರತವನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ ರಸೂಲ್. 1 ಏಕದಿನ ಹಾಗೂ 1 ಟಿ20 ಪಂದ್ಯ ಮಾತ್ರ ಆಡಿದರೂ, ದೇಶೀಯ ಕ್ರಿಕೆಟ್‌ನಲ್ಲಿ ಭಾರಿ ಯಶಸ್ಸು ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಅವರು, ಜಮ್ಮು-ಕಾಶ್ಮೀರ ಕ್ರಿಕೆಟ್ ಬೆಳವಣಿಗೆಗೆ ನೀಡಿದ ಕೊಡುಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್​ಸಿಬಿ ಆಟಗಾರ
Parvez Rasool
ಪೃಥ್ವಿಶಂಕರ
|

Updated on:Oct 20, 2025 | 4:30 PM

Share

ಟೀಂ ಇಂಡಿಯಾ (Team India) ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಎರಡೂ ತಂಡಗಳು ಏಕದಿನ ಸರಣಿಯನ್ನು ಆಡುತ್ತಿವೆ. ಈ ಸರಣಿಯ ನಡುವೆ, ಭಾರತೀಯ ಆಟಗಾರನೊಬ್ಬ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 15, 2014 ರಂದು ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಭಾರತದ ಪರ ಆಡಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿ ಪಡೆದಿದ್ದ ಪರ್ವೇಜ್ ರಸೂಲ್ (Parvez Rasool) ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಆದಾಗ್ಯೂ, ಟೀಂ ಇಂಡಿಯಾದಲ್ಲಿ ಪರ್ವೇಜ್​ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ತಲಾ ಒಂದೊಂದು ಪಂದ್ಯವನ್ನಾಡಿದ ಅವರಿಗೆ ಆ ಬಳಿಕ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.

36ನೇ ವಯಸ್ಸಿಗೆ ಪರ್ವೇಜ್ ರಸೂಲ್ ನಿವೃತ್ತಿ

ಭಾರತ ಪರ ಏಕದಿನ ಪಂದ್ಯ ಆಡಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪರ್ವೇಜ್ ರಸೂಲ್, ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಕ್ಟೋಬರ್ 18 ರಂದು ಬಿಸಿಸಿಐ ತಮ್ಮ ನಿರ್ಧಾರವನ್ನು ತಿಳಿಸಿರುವ ರಸೂಲ್, ಜೂನ್ 15, 2014 ರಂದು ಮಿರ್ಪುರದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ, ಅವರು 10 ಓವರ್‌ಗಳಲ್ಲಿ 60 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ ಜನವರಿ 26, 2017 ರಂದು ಕಾನ್ಪುರದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ರಸೂಲ್ ಆ ಪಂದ್ಯದಲ್ಲಿ 5 ರನ್‌ ಕಲೆಹಾಕಿ, ಇಯಾನ್ ಮಾರ್ಗನ್ ಅವರ ವಿಕೆಟ್ ಅನ್ನು ಸಹ ಪಡೆದಿದ್ದರು.

ಮಾಜಿ ಆರ್​ಸಿಬಿ ಆಟಗಾರ

ಭಾರತ ತಂಡದ ಪರ ಹೆಚ್ಚಿಗೆ ಆಡುವ ಅವಕಾಶ ಪಡೆಯದ ರಸೂಲ್ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 95 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರಸೂಲ್, 5648 ರನ್ ಗಳಿಸಿದ್ದು, 352 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಹಾಗೆಯೇ 164 ಲಿಸ್ಟ್ ಎ ಪಂದ್ಯಗಳು ಮತ್ತು 71 ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ (2013/14 ಮತ್ತು 2017/18) ಅತ್ಯುತ್ತಮ ಆಲ್-ರೌಂಡರ್‌ಗಾಗಿ ಲಾಲಾ ಅಮರನಾಥ್ ಟ್ರೋಫಿಯನ್ನು ಎರಡು ಬಾರಿ ಪಡೆದಿದ್ದರು. ಐಪಿಎಲ್‌ನಲ್ಲಿ, ಅವರು ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 11 ಪಂದ್ಯಗಳನ್ನು ಆಡಿದ್ದಾರೆ.

ನಿವೃತ್ತಿಯ ನಂತರ ರಸೂಲ್ ಹೇಳಿದ್ದೇನು?

ನಿವೃತ್ತಿ ಘೋಷಿಸಿದ ನಂತರ ಸ್ಪೋರ್ಟ್ಸ್‌ಸ್ಟಾರ್‌ ಜೊತೆ ಮಾತನಾಡಿರುವ ರಸೂಲ್, ‘ನಾವು ಆಡಲು ಪ್ರಾರಂಭಿಸಿದಾಗ, ಅನೇಕ ಜನರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಾವು ಕೆಲವು ದೊಡ್ಡ ತಂಡಗಳನ್ನು ಸೋಲಿಸಿದ್ದೇವೆ ಮತ್ತು ರಣಜಿ ಟ್ರೋಫಿ ಮತ್ತು ಇತರ ಬಿಸಿಸಿಐ-ಸಂಯೋಜಿತ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಾನು ದೀರ್ಘಕಾಲದವರೆಗೆ ತಂಡದ ನಾಯಕನಾಗಿದ್ದೆ ಮತ್ತು ತಂಡದ ಯಶೋಗಾಥೆಗೆ ಸ್ವಲ್ಪ ಕೊಡುಗೆ ನೀಡುವುದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Mon, 20 October 25