
ಪಾಕಿಸ್ತಾನ್ ಕ್ರಿಕೆಟ್‌ನಲ್ಲಿ ಸದ್ಯ ಎದ್ದಿರುವ ಸೈಬರ್ ಕ್ರೈಮ್ ವಿವಾದ ಮತ್ತೊಂದು ಪ್ರಮುಖ ತಿರುವು ಪಡೆದುಕೊಂಡಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ನಡೆದಿದೆ ಎನ್ನಲಾದ ಆನ್‌ಲೈನ್ ಬೆಟ್ಟಿಂಗ್ ಮತ್ತು ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ಬ್ಯಾಟರ್ ಮೊಹಮ್ಮದ್ ರಿಝ್ವಾನ್ಗೆ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಮಾತನಾಡದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ.
ಕಳೆದ ವಾರ ರಿಝ್ವಾನ್ ಅವರು ತಮ್ಮ ಮೇಲಿರುವ ಆರೋಪಗಳ ಕುರಿತು ಮಾಧ್ಯಮ ಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನೇತೃತ್ವದ ಮಂಡಳಿಯ ಅನುಮತಿ ಕೋರಿದ್ದರು. ಕೇಂದ್ರ ಒಪ್ಪಂದದ ನಿಯಮಗಳ ಅಡಿಯಲ್ಲಿ ಅನುಮತಿಗಾಗಿ ಅವರು ಎರಡು ಬಾರಿ ಪ್ರಯತ್ನಿಸಿದ್ದರೂ, ಪ್ರಸ್ತುತ ಉಂಟಾಗಿರುವ ಗೊಂದಲ ಮತ್ತು ಊಹಾಪೋಹಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಿಸಿಬಿ ಅವರ ಮನವಿಯನ್ನು ತಿರಸ್ಕರಿಸಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮೊಹಮ್ಮದ್ ರಿಝ್ವಾನ್ ಮತ್ತು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಅವರು ಆನ್‌ಲೈನ್ ಬೆಟ್ಟಿಂಗ್ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಹಾಗೂ ಡ್ರೆಸ್ಸಿಂಗ್ ರೂಮ್‌ನ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ (NCCIA) ತನಿಖೆ ನಡೆಸುತ್ತಿದೆ.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮಧ್ಯದಲ್ಲೇ ಮೊಹಮ್ಮದ್ ರಿಝ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರನ್ನು ತವರಿಗೆ ವಾಪಸ್ ಕರೆಯಿಸಿಕೊಳ್ಳಲಾಗಿತ್ತು. ಲಂಡನ್‌ನಲ್ಲಿರುವಾಗಲೇ ಪಿಸಿಬಿ ಭದ್ರತಾ ತಂಡವು ಇಬ್ಬರೂ ಆಟಗಾರರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಸೈಬರ್ ಕ್ರೈಮ್ ಏಜೆನ್ಸಿಗೆ ಹಸ್ತಾಂತರಿಸಿದೆ.
NCCIA ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ರಿಝ್ವಾನ್ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕ್ರಿಕೆಟ್ ಭ್ರಷ್ಟಾಚಾರದ ವಿಷಯಗಳು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ (ACU) ವ್ಯಾಪ್ತಿಗೆ ಬರುತ್ತವೆ, ಹೀಗಾಗಿ ಸೈಬರ್ ಕ್ರೈಮ್ ಸಂಸ್ಥೆಗೆ ಇದರ ತನಿಖೆಯ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ್ದು, ಆಟಗಾರನಿಗೆ ಕಿರುಕುಳ ನೀಡದಂತೆ ತನಿಖಾ ಸಂಸ್ಥೆಗೆ ಸೂಚಿಸಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ರಿಝ್ವಾನ್ಗೆ ಆದೇಶಿಸಿದೆ.
ನ್ಯಾಯಾಲಯದಿಂದ ಹಿನ್ನಡೆಯಾದ ಬೆನ್ನಲ್ಲೇ, ರಿಝ್ವಾನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅನ್ನು ಸಂಪರ್ಕಿಸಿದ್ದಾರೆ. ಲಂಡನ್‌ನಲ್ಲಿ ತಮ್ಮ ಫೋನ್ ಮುಟ್ಟುಗೋಲು ಹಾಕಿಕೊಂಡಿರುವುದು ಐಸಿಸಿಯ ನಿಯಮಾವಳಿಗಳಿಗೆ ಬದ್ಧವಾಗಿದೆಯೇ ಎಂದು ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿಎಸ್ಕೆ ಝಹೀರ್ ಖಾನ್ ಅವರನ್ನೇ ಕೋಚ್ ಆಗಿ ನೇಮಿಸಲು ಕಾರಣಗಳೇನು?
ತಮ್ಮ ಫೋನ್ ಜಪ್ತಿ ಮಾಡಿದ ರೀತಿ ಮತ್ತು ಐಸಿಸಿಗೆ ಬರೆದ ಪತ್ರದ ಕುರಿತು ಸಾರ್ವಜನಿಕವಾಗಿ ತಮ್ಮ ಪರವಾದ ವಾದವನ್ನು ಮಂಡಿಸಲು ರಿಝ್ವಾನ್ ಉತ್ಸುಕರಾಗಿದ್ದರು. ಆದರೆ, ಸದ್ಯಕ್ಕೆ ಸೈಬರ್ ಕ್ರೈಮ್ ಸಂಸ್ಥೆಯ ವಿಧಿವಿಜ್ಞಾನ ವರದಿ ಬರುವವರೆಗೂ ಆಟಗಾರರು ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಈ ವಿವಾದ ದಿನದಿಂದ ದಿನಕ್ಕೆ ಪಾಕಿಸ್ತಾನ್ ಕ್ರಿಕೆಟ್‌ನ ಘನತೆಗೆ ಧಕ್ಕೆ ತರುತ್ತಿದ್ದು, ತನಿಖೆಯ ಅಂತಿಮ ವರದಿಗಾಗಿ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದೆ.