IPL 2025 Final: ನಿಟ್ಟುಸಿರು ಬಿಟ್ಟ ಆರ್‌ಸಿಬಿ ಫ್ಯಾನ್ಸ್; ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್
Phil Salt Joins RCB for IPL Final: ಐಪಿಎಲ್ ಫೈನಲ್‌ಗೆ ಮುನ್ನ ತಮ್ಮ ಮಗುವಿನ ಜನನದಿಂದಾಗಿ ತಾಯ್ನಾಡಿಗೆ ಹೋಗಿದ್ದ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಅಹಮದಾಬಾದ್‌ಗೆ ಮರಳಿದ್ದಾರೆ. ತಂಡದೊಂದಿಗೆ ಸೇರಿಕೊಂಡಿರುವ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಅವರ ಆಗಮನವು ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಸಾಲ್ಟ್ ಅವರ ಪ್ರಮುಖ ಇನ್ನಿಂಗ್ಸ್‌ಗಳು ಈ ಸೀಸನ್‌ನಲ್ಲಿ ಆರ್‌ಸಿಬಿಗೆ ಬಹಳಷ್ಟು ನೆರವಾಗಿದೆ.

9 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL 2025) ಫೈನಲ್ ಆಡಲು ಸಿದ್ಧವಾಗಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಆರ್‌ಸಿಬಿಗೆ ಫೈನಲ್ ಪಂದ್ಯಕ್ಕೂ ಮುನ್ನ ಕಾಡುತ್ತಿದ್ದ ಅದೊಂದು ಭಯಕ್ಕೆ ಮುಕ್ತಿ ಸಿಕ್ಕಿದೆ. ಅದೆನೆಂದರೆ ಫೈನಲ್ ಪಂದ್ಯಕ್ಕೂ ಮುನ್ನ ತಂದೆಯಾದ ಖುಷಿಯಲ್ಲಿದ್ದ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ (Phil Salt) ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಅವರು ಫೈನಲ್ ಆಡುತ್ತಾರೋ? ಇಲ್ಲವೋ ಎಂಬ ಆತಂಕ ಶುರುವಾಗಿತ್ತು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಮಡದಿ ಹಾಗೂ ಮಗುವಿನ ಮುಖ ನೋಡಿ ಫಿಲ್ ಸಾಲ್ಟ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅಲ್ಲದೆ ಅಹಮದಾಬಾದ್‌ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
ತಂದೆಯಾದ ಫಿಲ್ ಸಾಲ್ಟ್
ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಬದ್ಧತೆ ಮತ್ತು ಕ್ರೀಡಾ ಸ್ಫೂರ್ತಿ ಎಲ್ಲರ ಹೃದಯ ಗೆದ್ದಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಸಾಲ್ಟ್ ತಮ್ಮ ಮೊದಲ ಮಗುವಿನ ಜನನಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಹೀಗಾಗಿ ಅವರು ಆರ್‌ಸಿಬಿ ಪಾಳಯದಿಂದ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಸಾಲ್ಟ್ ಅಹಮದಾಬಾದ್‌ಗೆ ಬಂದಿಳಿದಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಮೇ 29 ರಂದು ನಡೆದಿದ್ದ ಕ್ವಾಲಿಫೈಯರ್ -1 ರಲ್ಲಿ ತಂಡದ ಪರ ಆಡಿದ್ದ ಸಾಲ್ಟ್, ಪಂದ್ಯ ಮುಗಿದ ನಂತರ ತಮ್ಮ ದೇಶಕ್ಕೆ ಮರಳಿದ್ದರು. ಹೀಗಾಗಿ ಆರ್‌ಸಿಬಿಯ ತರಬೇತಿ ಸೆಷನ್ನಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳಲ್ಲಿ ಕಳವಳವನ್ನು ಉಂಟುಮಾಡಿತ್ತು. ಆದರೆ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿರುವ ಸುದ್ದಿ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.
Update: Phil Salt has returned to Ahmedabad this morning after having gone home for the birth of his child #RCBvPBKS #IPL2025 pic.twitter.com/Nh9JjfAYZy
— ESPNcricinfo (@ESPNcricinfo) June 3, 2025
ಆರ್‌ಸಿಬಿ ಪರ ಸಾಲ್ಟ್ ಪ್ರದರ್ಶನ
ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ಹಲವು ಪ್ರಮುಖ ಇನ್ನಿಂಗ್ಸ್ಗಳನ್ನು ಆಡಿರುವ ಫಿಲ್ ಸಾಲ್ಟ್ ಆಡಿರುವ 12 ಪಂದ್ಯಗಳಲ್ಲಿ 387 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಸ್ಟ್ರೈಕ್ ರೇಟ್ 175.90 ಮತ್ತು ಸರಾಸರಿ 35.18 ಆಗಿದೆ. ಅದೇ ಸಮಯದಲ್ಲಿ, ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಾಲ್ಟ್ 27 ಎಸೆತಗಳಲ್ಲಿ 56 ಅಜೇಯ ರನ್ ಗಳಿಸುವ ಮೂಲಕ ಆರ್‌ಸಿಬಿ 10 ಓವರ್‌ಗಳಲ್ಲಿ 102 ರನ್‌ಗಳ ಗುರಿ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೈನಲ್ ಪಂದ್ಯಕ್ಕೆ ಸಾಲ್ಟ್ ಲಭ್ಯತೆ ಅತ್ಯವಶ್ಯಕವಾಗಿತ್ತು.
IPL 2025 Final: ‘ಈ ಸಲ ಕಪ್ ಆರ್‌ಸಿಬಿಗೆ’; ಫೈನಲ್ಗೂ ಮುನ್ನ ಸಟ್ಟಾ ಬಜಾರ್ ಭವಿಷ್ಯ
ಆರ್‌ಸಿಬಿಗೆ ಫಿಲ್ ಸಾಲ್ಟ್ ಅಗತ್ಯ
ಈ ಆವೃತ್ತಿಯಲ್ಲಿ ಸಾಲ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನೇಕ ಪಂದ್ಯಗಳಲ್ಲಿ ಆರ್‌ಸಿಬಿಗೆ ಬಲವಾದ ಆರಂಭವನ್ನು ನೀಡಿದೆ. ಅವರ ಮತ್ತು ವಿರಾಟ್ ಕೊಹ್ಲಿಯ ಆರಂಭಿಕ ಜೋಡಿ ಪ್ರತಿ ಓವರ್‌ಗೆ 10.29 ರ ರನ್ ರೇಟ್ನಲ್ಲಿ ರನ್ ಕಲೆಹಾಕಿತ್ತು. ಹೀಗಾಗಿ ಫೈನಲ್ ಪಂದ್ಯದಲ್ಲೂ ಈ ಜೋಡಿ ಇದೇ ರೀತಿಯ ಪ್ರದರ್ಶನ ನೀಡಿದರೆ ಆರ್‌ಸಿಬಿಗೆ ಗೆಲುವು ಸುಲಭವಾಗಿ ದಕ್ಕಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Tue, 3 June 25
