
ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸ್ಥಗಿತಗೊಂಡರೆ, ಅತ್ತ ಪಾಕಿಸ್ತಾನ್ ಸೂಪರ್ ಲೀಗ್ (PSL 2025) ಅನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಎರಡೂ ಲೀಗ್ಗಳು ಮತ್ತೆ ಶುರುವಾಗುತ್ತಿದೆ. ಅದು ಕೂಡ ಒಂದೇ ದಿನಾಂಕದಂದು ಎಂಬುದೇ ಅಚ್ಚರಿ. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವ ದಿನವೇ ಪಾಕಿಸ್ತಾನ್ ಸೂಪರ್ ಲೀಗ್ಗೂ ಚಾಲನೆ ನೀಡಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಪಾಕಿಸ್ತಾನ್ ಸೂಪರ್ ಲೀಗ್ 2025 ರ ಉಳಿದ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯಂತೆ ಪಿಎಸ್ಎಲ್ 2025 ಮೇ 17 ರಂದು ಮತ್ತೆ ಪ್ರಾರಂಭವಾಗುತ್ತದೆ. ಇದೇ ದಿನಾಂಕದಂದು ಐಪಿಎಲ್ ಕೂಡ ಶುರುವಾಗುತ್ತಿರುವುದು ವಿಶೇಷ.
ಪಿಎಸ್ಎಲ್ನ ಹೊಸ ವೇಳಾಪಟ್ಟಿಯನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಲೀಗ್ ಕುರಿತು ನವೀಕರಣವನ್ನು ನೀಡಿದ್ದಾರೆ. ಅದರಂತೆ ಟೂರ್ನಿಯು ಮೇ 17 ರಿಂದ ಆರಂಭವಾಗಲಿದ್ದು, ಮೇ 25 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್ನ ಉಳಿದ 8 ಪಂದ್ಯಗಳಲ್ಲಿ ವಿದೇಶಿ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಈಗಾಗಲೇ ಎಲ್ಲಾ ಆಟಗಾರರು ತವರಿಗೆ ಹಿಂತಿರುಗಿದ್ದು, ಹೀಗಾಗಿ ಅವರು ಮರಳುವ ಸಾಧ್ಯತೆಯಿಲ್ಲ. ಏಕೆಂದರೆ ಭಾರತದ ದಾಳಿಯಿಂದಾಗಿ ಸ್ಯಾಮ್ ಬಿಲ್ಲಿಂಗ್ಸ್, ಡೇರಿಲ್ ಮಿಚೆಲ್, ಕುಸಲ್ ಪೆರೆರಾ, ಡೇವಿಡ್ ವಿಝ, ಟಾಮ್ ಕರನ್ ಸೇರಿದಂತೆ ಹಲವು ವಿದೇಶಿ ಆಟಗಾರರು ಸಂಪೂರ್ಣ ಭಯಭೀತರಾಗಿದ್ದರು. ಹೀಗಾಗಿ ಮತ್ತೆ ಟೂರ್ನಿಯನ್ನು ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: IPL 2025: ಕೇವಲ 2 ಮ್ಯಾಚ್ಗೆ ಮಾತ್ರ: ಉಳಿದ ಪಂದ್ಯಗಳಿಂದ RCB ಆಟಗಾರ ಔಟ್
ಪಾಕಿಸ್ತಾನ್ ಸೂಪರ್ ಲೀಗ್ನ ಕೊನೆಯ ಪಂದ್ಯಗಳೂ ಕೂಡ ಪಾಕ್ನಲ್ಲೇ ಆಡಲಾಗುತ್ತದೆ. ಎಲಿಮಿನೇಟರ್, ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ ಒಟ್ಟು 8 ಪಂದ್ಯಗಳು ಬಾಕಿಯಿದ್ದು, ಈ ಎಲ್ಲಾ ಪಂದ್ಯಗಳು ರಾವಲ್ಪಿಂಡಿ, ಮುಲ್ತಾನ್ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ. ಇನ್ನು ಫೈನಲ್ ಸೇರಿದಂತೆ ಪ್ಲೇಆಫ್ ಸುತ್ತಿನ ಪಂಧ್ಯಗಳನ್ನು ಸಹ ಲಾಹೋರ್ನಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ.